BBMP Reservation: ಮಾರ್ಗಸೂಚಿ ಉಲ್ಲಂಘಿಸಿ ಬಿಬಿಎಂಪಿ ಮೀಸಲಾತಿ ಪ್ರಕಟ; ರಾಮಲಿಂಗಾರೆಡ್ಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 05, 2022 | 2:48 PM

ಸರ್ಕಾರದಿಂದ ಅನುಮೋದನೆ ಪಡೆಯದೆ ಮೀಸಲಾತಿ ಪ್ರಕಟ ಮಾಡಲಾಗಿದೆ. ವಾರ್ಡ್ ವಿಂಗಡಣೆ ಮಾಡುವಾಗಲೂ ಮಾರ್ಗಸೂಚಿ ಅನುಸರಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ.

BBMP Reservation: ಮಾರ್ಗಸೂಚಿ ಉಲ್ಲಂಘಿಸಿ ಬಿಬಿಎಂಪಿ ಮೀಸಲಾತಿ ಪ್ರಕಟ; ರಾಮಲಿಂಗಾರೆಡ್ಡಿ
ಬಿಬಿಎಂಪಿ ಕಚೇರಿ
Follow us on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆ (Bruhat Bengaluru Mahanagara Palike – BBMP) ಪ್ರಕಟಿಸಿರುವ ಮೀಸಲಾತಿಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಮೀಸಲಾತಿ ಕುರಿತು ಪ್ರಕಟಿಸಿರುವ ಅವರು, ಸುಪ್ರಿಂಕೋರ್ಟ್ ನಿರ್ದೇಶನದ ಪ್ರಕಾರ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಆದರೆ ಸರ್ಕಾರದಿಂದ ಅನುಮೋದನೆ ಪಡೆಯದೆ ಮೀಸಲಾತಿ ಪ್ರಕಟ ಮಾಡಲಾಗಿದೆ. ವಾರ್ಡ್ ವಿಂಗಡಣೆ ಮಾಡುವಾಗಲೂ ಮಾರ್ಗಸೂಚಿ ಅನುಸರಿಸಿಲ್ಲ ಎಂದು ಹೇಳಿದರು.

ಹಿಂದೆ ಕಂದಾಯ ಅಧಿಕಾರಿಗಳು ಮೀಸಲಾತಿ ನಿಗದಿ ಮಾಡುತ್ತಿದ್ದರು. ಆದರೆ ಈ ಬಾರಿ ಮುಖ್ಯ ಆಯುಕ್ತರು ಒಂದು ಸಭೆಯನ್ನೂ ಮಾಡಿಲ್ಲ. ಆರ್​ಎಸ್​​ಎಸ್​ನ ಕೇಶವಕೃಪಾದಲ್ಲಿ ಕುಳಿತವರ ಸೂಚನೆಯಂತೆ ವಾರ್ಡ್ ವಿಂಗಡಣೆ ಆಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೋ ಅಲ್ಲೆಲ್ಲ ಅಮೀಬಾ ರೀತಿ ವಾರ್ಡ್ ವಿಂಗಡಣೆ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯು ಒಂದು ರಬ್ಬರ್ ಸ್ಟಾಂಪ್‌ ಇಲಾಖೆಯಂತೆ ಕೆಲಸ ಮಾಡುತ್ತಿದ್ದೆ. ಅಲ್ಲಿನ ಅಧಿಕಾರಿಗಳ ತಲೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕರು ಇರುವ ಕಡೆ ಹಳಬರು ನಿಲ್ಲಬಾರದು ಎಂದೇ ಮೀಸಲಾತಿಯನ್ನು ಬೇಕಾಬಿಟ್ಟಿಯಾಗಿ ಬದಲಿಸಲಾಗಿದೆ. ಏಳು ವಾರ್ಡ್​ಗಳಿಗೆ ಮಹಿಳಾ ಮೀಸಲಾತಿ ಕೊಟ್ಟಿದ್ದಾರೆ. ನಗರಾಭಿವೃದ್ಧಿ ಇಲಾಖೆಯು ಬಿಜೆಪಿ ಕಚೇರಿ ಆಗಿಬಿಟ್ಟಿದೆ. ಸಾಮಾನ್ಯ ವರ್ಗಕ್ಕೆ 65 ಸ್ಥಾನ ಕೊಟ್ಟಿದ್ದಾರೆ. ಅದರಲ್ಲಿ 49 ವಾರ್ಡ್​ಗಳು ಬಿಜೆಪಿ ಶಾಸಕರ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.

ಬಿಜೆಪಿಗೆ ಸೋಲಿನ ಭೀತಿ: ರಿಜ್ವಾನ್ ಅರ್ಷದ್

ಮೀಸಲಾತಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಮಾತನಾಡಿ, ಬೆಂಗಳೂರು ನಗರಕ್ಕೆ ಮೀಸಲಾತಿ ಪಟ್ಟಿಯಿಂದ ಅನುಕೂಲ ಆಗಲು ಸಾದ್ಯವಿಲ್ಲ ಎಂದು ಹೇಳಿದರು. ಬಿಜೆಪಿಯವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿ ವಿಂಗಡಿಸಿದ್ದಾರೆ. ಒಂದು ವಾರ್ಡ್​ನಲ್ಲಿ 16,000 ಜನಸಂಖ್ಯೆಯಿದ್ದರೆ, ಪಕ್ಕದ ವಾರ್ಡ್​ನಲ್ಲಿ 45,000 ಜನಸಂಖ್ಯೆಯಿದೆ. ಜನಸಂಖ್ಯೆಗಿಂತಲೂ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನಮ್ಮ ಯಾವುದೇ ಆಕ್ಷೇಪಗಳನ್ನು ಅವರು ಪರಿಗಣಿಸುತ್ತಿಲ್ಲ. ಬೆಂಗಳೂರಿಗೆ ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ. ಜನಸಂಖ್ಯೆಗೆ ತಕ್ಕ ಪ್ರಾತಿನಿಧ್ಯ ಸಿಗಬಾರದು ಎಂದು ಹೀಗೆ ಮಾಡಿದ್ದಾರೆ. ನ್ಯಾಯಯುತ ಚುನಾವಣೆಗೆ ಹೋದರೆ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿ ಮೀಸಲಾತಿಯಲ್ಲಿ ಅನ್ಯಾಯ ನಡೆಯುತ್ತಿದೆ ಎಂದರು.

ಅಧ್ವಾನದ ಮೀಸಲಾತಿ: ಜಮೀರ್ ಅಹಮದ್

ಬಿಬಿಎಂಪಿ ವಾರ್ಡ್​​ಗಳ ಮೀಸಲಾತಿ ಪಟ್ಟಿ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ನನ್ನ ಕ್ಷೇತ್ರದಲ್ಲಿ 6 ವಾರ್ಡ್​ಗೆ ಮಹಿಳಾ ಮೀಸಲಾತಿ ಘೋಷಿಸಿದ್ದಾರೆ. ಕಾಂಗ್ರೆಸ್​ಗೆ ಹಿನ್ನಡೆಯಾಗಬೇಕು ಎಂಬ ಕಾರಣಕ್ಕೆ ಹೀಗೆ ಅಧ್ವಾನ ಮಾಡಿದ್ದಾರೆ. ಎಸ್​​ಟಿ ಸಮುದಾಯ ಇಲ್ಲದ ಕಡೆ ಎಸ್​​ಟಿ ಮೀಸಲಾತಿ ಘೋಷಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.