ಬೆಂಗಳೂರು: ವಿದ್ಯುತ್ ವ್ಯತ್ಯಯದಿಂದ ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಿಮ್ಸ್ನ ವೆಂಟಿಲೇಟರ್ಗಳಲ್ಲಿ ಸಮಸ್ಯೆ ಉಂಟಾಗಿ ರೋಗಿಗಳು ಮೃತಪಟ್ಟ ವಿಚಾರ ವಿಧಾನಸೌಧದಲ್ಲಿ ಇಂದು (ಸೆ.15) ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಇದು ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳದಿದ್ದುದು ತಪ್ಪು. ಮೃತಪಟ್ಟವರಿಗೆ ₹ 25 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಮಾತು ಮುಗಿಸಿದ ನಂತರ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ‘ಪ್ರಕರಣದ ಬಗ್ಗೆ ವಿಷಾದವಿದೆ. ಆದರೆ ಸಿದ್ದರಾಮಯ್ಯ ಅವರು ಬಳಸಿರುವ ಭಾಷೆಯನ್ನು ಒಪ್ಪಲು ಆಗುವುದಿಲ್ಲ’ ಎಂದು ಹೇಳಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
‘ಸಿದ್ದರಾಮಯ್ಯನವರು ಹೀಗೆ ಮಾತನಾಡುತ್ತಾರೆ, ಇಂಥ ಪದಗಳನ್ನು ಬಳಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಸರ್ಕಾರವೇ ಮಾಡಿರುವ ಕೊಲೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಸರಿಯಲ್ಲ’ ಎಂದು ಮಾಧುಸ್ವಾಮಿ ಹೇಳಿದರು. ಕಾಂಗ್ರೆಸ್ ಸದಸ್ಯರಾದ ಕೃಷ್ಣಬೈರೇಗೌಡ, ಆರ್.ವಿ.ದೇಶಪಾಂಡೆ ಮತ್ತಿತರರು ‘ಸರ್ಕಾರವು ಮಾನವೀಯ ನಿಲುವಿನಿಂದ ಸಮಸ್ಯೆ ಗಮನಿಸಬೇಕು. ಹಟ ಸಲ್ಲದು’ ಎಂದರು. ಸದನದಲ್ಲಿ ಗಲಾಟೆ ಹೆಚ್ಚಾಗಿ, ಯಾರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಯಿತು.
ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಶ್ರೀರಾಮುಲು, ‘ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಐಸಿಯುನಲ್ಲಿ ಇದ್ದವರು ಕೇವಲ ವೆಂಟಿಲೇಟರ್ ವೈಫಲ್ಯದಿಂದಷ್ಟೇ ಮೃತಪಟ್ಟಿಲ್ಲ. ಅವರ ಸಾವಿಗೆ ಬೇರೆ ಕಾರಣಗಳು ಇವೆ. ರೋಗಿಗಳ ಆರೋಗ್ಯ ಸ್ಥಿತಿ ವ್ಯತ್ಯಯಗೊಂಡಿದ್ದರಿಂದ ಮೃತಪಟ್ಟರು. ನಾನು ಆಸ್ಪತ್ರೆಯ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದರು.
ಸಚಿವ ಮಾಧುಸ್ವಾಮಿ ಮಾತನಾಡಿ, ‘ವೆಂಟಿಲೇಟರ್ ಇರುವ ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ. ಇದನ್ನು ಸರ್ಕಾರದ ತಪ್ಪು ಎಂದು ಒಪ್ಪಿಕೊಂಡು ಪರಿಹಾರ ಘೋಷಿಸಲು ಅಗುವುದಿಲ್ಲ. ಪ್ರತಿಪಕ್ಷದ ನಾಯಕರ ಸಲಹೆಯಂತೆ ತನಿಖೆ ಮಾಡಿಸುತ್ತೇವೆ’ ಎಂದರು. ‘ಮಾನವೀಯ ದೃಷ್ಟಿಯಿಂದ ಪರಿಶೀಲಿಸಿ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ ನಂತರ, ‘ಅದರ ಬಗ್ಗೆ ಗಮನ ಹರಿಸುತ್ತೇವೆ’ ಎಂದರು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಘಟನೆಯ ಬಗ್ಗೆ ಸೂಕ್ತ ಇಲಾಖಾ ತನಿಖೆ ನಡೆಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪದೋಷಗಳ ಬಗ್ಗೆ ವರದಿ ನೀಡಲು ಬಿಎಂಸಿಆರ್ ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ.
1/2 pic.twitter.com/IpDT27HCcZ
— Dr Sudhakar K (@mla_sudhakar) September 15, 2022
ತನಿಖೆಗೆ ಸಮಿತಿ ನೇಮಕ
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ವಿಸ್ತೃತ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಬಿಎಂಸಿಆರ್ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಸಂಬಂಧ ಆರೋಗ್ಯ ಸಚಿವ ಡಾ ಸುಧಾಕರ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ‘ಸಮಿತಿಯ ತನಿಖಾ ವರದಿ ಕೈಸೇರಿದ ಕೂಡಲೇ ಕರ್ತವ್ಯ ಲೋಪ ಎಸಗಿ ಅಮಾಯಕ ರೋಗಿಗಳ ದುರಂತ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು’
Published On - 1:44 pm, Thu, 15 September 22