ವಿಶ್ವವಿಖ್ಯಾತ ಮೈಸೂರು ದಸರಾಗೆ ಪ್ರಧಾನಿ ಮೋದಿ ಆಗಮನ ರದ್ದು: ಸಿಎಂ ಕಚೇರಿಗೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಮಾಹಿತಿ
ಮೈಸೂರು ದಸರಾಗೆ ಪ್ರಧಾನಿ ನರೇಂದ್ರ ಮೋದಿ ಬರುವ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಪ್ರಧಾನಿ ನರೇಂದ್ರ ಮೋದಿ ಬರುವುದಿಲ್ಲ ಎಂದು ಸಿಎಂ ಕಚೇರಿಗೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ. ಟಿವಿ9ಗೆ ಸಿಎಂ ಕಚೇರಿಯ ಉನ್ನತ ಮೂಲಗಳಿಂದ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಜಂಬೂ ಸವಾರಿಗೆ ಪ್ರಧಾನಿ ಮೋದಿ ಬರುವುದಿಲ್ಲವೆಂದು ಮಾಹಿತಿ ರವಾನೆ ಮಾಡಲಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮದ ಬಗ್ಗೆ ಸಿಎಂ ಕಚೇರಿಗೆ PMO ಮಾಹಿತಿ ನೀಡಲಾಗಿದೆ. ಈ ಕುರಿತು ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮೈಸೂರು ದಸರಾಗೆ ಪ್ರಧಾನಿ ನರೇಂದ್ರ ಮೋದಿ ಬರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಲವು ಕಾರ್ಯಕ್ರಮಗಳ ಪಟ್ಟಿಯನ್ನು ಅವರು ಕೊಟ್ಟಿದ್ದಾರೆ. ಆದ್ರೆ ಯಾವುದೇ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಖಚಿತಪಡಿಸಿಲ್ಲ ಎಂದು ಹೇಳಿದರು.
ಇನ್ನೂ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಮೈಸೂರು ದಸರಾಗೆ ಪ್ರಧಾನಿ ಮೋದಿ ಬರುವ ಬಗ್ಗೆ ಮಾಹಿತಿ ಇಲ್ಲ. ಯೋಗ ದಿನಾಚರಣೆಯಂದು ಮೈಸೂರಿಗೆ ಪ್ರಧಾನಿ ಮೋದಿ ಬಂದಿದ್ದರು. ಆಗ ಮೋದಿ ಮೈಸೂರು ದಸರಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ರು. ಈ ಕಾರಣ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು. ಪ್ರಧಾನಿಗಳು ಬರುತ್ತಾ ಇದ್ದಾರೋ ಇಲ್ಲವೋ ಎಂಬುದು ನಿಖರವಾಗಿ ತಿಳಿದಿಲ್ಲ ಎಂದರು.
ಯೋಗ ದಿನಕ್ಕೆ ಪ್ರಧಾನಿಗಳು ಮೈಸೂರಿಗೆ ಬಂದಿದ್ದು, ತಾಯಿ ಚಾಮುಂಡಿ ದರ್ಶನ ಮಾಡಿದ್ದರು. ಆಗ ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದರು. ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷವಾಗಿರುತ್ತದೆ. ದಸರಾ ಸಿದ್ಧತೆ ಹೇಗಿದೆ, ಪ್ರಧಾನಿಗಳು ದಸರಾಗೆ ಬರುವುದಾದರೆ ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ. ರಾಷ್ಟ್ರಪತಿ ಬರುತ್ತಿರುವ ಕಾರಣ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದರು.
ಈ ಬಾರಿ ದಸರಾ ಉದ್ಘಾಟನೆ ಮಾಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು:
ಜಗದ್ವಿಖ್ಯಾತ ಮೈಸೂರು ಸದರಾ ಈ ಬಾರಿ ಸೆಪ್ಟೆಂಬರ್ 26 ರಂದು ಸೋಮವಾರದಿಂದ ಆರಂಭ ಆಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಯಾರನ್ನು ಆಹ್ವಾನಿಸುವುದು ಎಂಬುದರ ಬಗ್ಗೆ ಸಭೆ ನಡೆದಿತ್ತು. ಆ ಸಭೆಯ ಬಳಿಕ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗಿತ್ತು. ನಮ್ಮ ಪತ್ರಕ್ಕೆ ಸಮ್ಮತಿಸಿ ಇಂದು ಪತ್ರ ಬಂದಿದೆ. ಹೀಗಾಗಿ ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಬೆಂಗಳೂರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:07 pm, Thu, 15 September 22