ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ, ಡಿಕೆ ಶಿವಕುಮಾರ್ ಮರು ಆಯ್ಕೆ ಬಹುತೇಕ ಖಚಿತ
ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 479 ಮಂದಿ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (Kerala Pradesh Congress Committee – KPCC) ಅಧ್ಯಕ್ಷ ಸ್ಥಾನಕ್ಕೆ ಇಂದು (ಸೆ 16) ಚುನಾವಣೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಅವರ ಎದುರು ಯಾರಾದರೂ ನಾಮಪತ್ರ ಸಲ್ಲಿಸಿದರೆ ಮಾತ್ರ ಚುನಾವಣೆ ಪ್ರಕ್ರಿಯೆಗಳು ನಡೆಯಲಿವೆ. ನಗರದ ಅಂಬೇಡ್ಕರ್ ಭವನದಲ್ಲಿ ಎಐಸಿಸಿ ವರಿಷ್ಠ ಹಾಗೂ ಸದಸ್ಯತ್ವ ನೊಂದಣಿ ಉಸ್ತುವಾರಿ ಸುದರ್ಶನ ನಾಚಿಯಪ್ಪನ್ ಸಮ್ಮುಖದಲ್ಲಿ ಆಂತರಿಕ ಚುನಾವಣೆ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೈಲಾ ಪ್ರಕಾರ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕಿದೆ. ನೂತನ ಕೆಪಿಸಿಸಿ ಪದಾಧಿಕಾರಿಗಳು ಆಯ್ಕೆಯಾದಾಗ ಸಂಪ್ರದಾಯದಂತೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಬೇಕಿದೆ. ಆದರೆ ದಿನೇಶ್ ಗುಂಡೂರಾವ್ ರಾಜಿನಾಮೆ ಬಳಿಕ ಪದಾಧಿಕಾರಿಗಳ ಆಯ್ಕೆ ಮೂಲೆ ಗುಂಪಾಗಿತ್ತು. ಡಿಕೆಶಿ ಅಧ್ಯಕ್ಷರಾದ ಬಳಿಕ ಸದಸ್ಯತ್ವ ನೊಂದಣಿಗೆ ಚಾಲನೆ ಸಿಕ್ಕಿದೆ.
ಕೆಪಿಸಿಸಿಗೆ ಹೊಸ ಪದಾಧಿಕಾರಿಗಳು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿರುವ ಕಾರಣ ಎಲ್ಲಾ ರಾಜ್ಯಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಮೂರು ವರ್ಷಗಳ ಅವಧಿ ಪೂರ್ಣವಾಗದವರನ್ನು ಅಧಿಕಾರದಲ್ಲಿ ಮುಂದುವರಿಸುವ ಚಿಂತನೆ ವರಿಷ್ಠರ ಮಟ್ಟದಲ್ಲಿ ನಡೆದಿದೆ. ವರಿಷ್ಠರ ತೀರ್ಮಾನದ ಪ್ರಕಾರ ಡಿಕೆಶಿ ಇನ್ನೊಂದು ವರ್ಷ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಎಐಸಿಸಿ ಸೂಚನೆ ಮೇರೆಗೆ ಒಂದು ಸಾಲಿನ ನಿರ್ಣಯ ತೆಗೆದುಕೊಂಡು ಡಿಕೆಶಿ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು, ಕೆಪಿಸಿಸಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 479 ಮಂದಿ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.
Published On - 9:13 am, Fri, 16 September 22