ಐಷಾರಾಮಿ ವಿಲ್ಲಾಗಳ ಪರ ನಿಂತ ಬಿಬಿಎಂಪಿ: ಎಪ್ಸಿಲಾನ್, ದಿವ್ಯಶ್ರೀ ವಿಲ್ಲಾ ತೆರವು ಕಾರ್ಯಾಚರಣೆ ಸ್ಥಗಿತ, ಅನುಮಾನಗಳಿಗೆ ಕಾರಣವಾದ ನಡೆ
ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಗುರುತಿಸಿ, ನೀರಿನ ಸಹಜ ಹರಿವಿಗೆ ಇರುವ ತಡೆಗಳನ್ನು ನಿವಾರಿಸಲು ಮುಂದಾಗಿತ್ತು.
ಬೆಂಗಳೂರು: ಅಬ್ಬರದೊಂದಿಗೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಇದೀಗ ಇದ್ದಕ್ಕಿದ್ದಂತೆ ತಣ್ಣಗಾಗಿದೆ. ರಸ್ತೆಗಳ ಮೇಲೆ ನೀರು ಹರಿಯಲು ರಾಜಕಾಲುವೆ ಒತ್ತುವರಿ ಮುಖ್ಯ ಕಾರಣ ಎಂದು ಗುರುತಿಸಲಾಗಿತ್ತು. ಇದೇ ಕಾರಣಕ್ಕೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಗುರುತಿಸಿ, ನೀರಿನ ಸಹಜ ಹರಿವಿಗೆ ಇರುವ ತಡೆಗಳನ್ನು ನಿವಾರಿಸಲು ಮುಂದಾಗಿತ್ತು. ಈ ಪ್ರಕ್ರಿಯೆಯ ವೇಳೆ ಪ್ರಭಾವಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಷ್ಠಿತ ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದಲೂ ಒತ್ತುವರಿಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಆದರೆ ಇದೀಗ ಇದ್ದಕ್ಕಿಂತೆ ಒತ್ತುವರಿ ಅಧಿಕಾರಿಗಳು ಮತ್ತೊಂದು ಸ್ಪಷ್ಟನೆ ನೀಡಿದ್ದು, ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದ ಒತ್ತುವರಿಯಾಗಿಲ್ಲ ಎಂದು ಹೇಳಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಮೊದಲು ಬಿಬಿಎಂಪಿ ಪ್ರಕಟಿಸಿದ್ದ ಒತ್ತುವರಿದಾರರ ರಿಪೋರ್ಟ್ನಲ್ಲಿ ಎಪ್ಸಿಲಾನ್ ಹೆಸರು ಉಲ್ಲೇಖವಾಗಿತ್ತು. ಒತ್ತುವರಿ ಮಾಡಿಕೊಂಡ ಲೇಔಟ್ ಹಾಗೂ ಕಂಪನಿಯ ಹೆಸರನ್ನು ಸರ್ವೆ ನಂಬರ್ ಸಮೇತ ಅಧಿಕಾರಿಗಳು ಬಹಿರಂಗಪಡಿಸಿತ್ತು. ವಿಲೇಜ್ ಮ್ಯಾಪ್ ಪ್ರಕಾರ ಒತ್ತುವರಿ ಆಗಿದೆ ಎಂದು ಬಿಬಿಎಂಪಿ ಹೇಳಿತ್ತು. ಇದರ ಜೊತೆಗೆ ಸ್ಥಳೀಯರು ಈ ಸ್ಥಳದಲ್ಲಿ ರಾಜಕಾಲುವೆ ಇತ್ತು ಎಂದು ಮಾಹಿತಿ ನೀಡಿದ್ದರು. ಆದರೆ ಲೇಔಟ್ನವರು ಒತ್ತುವರಿ ಮಾಡಿಲ್ಲವೆಂದು ಹೇಳುತ್ತಲೇ ಇದ್ದರು.
ಮುಂದುವರಿದ ಕಾರ್ಯಾಚರಣೆ
ಬೆಂಗಳೂರಿನಲ್ಲಿ ಇಂದೂ ಸಹ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ದಾಸರಹಳ್ಳಿ, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ನಿನ್ನೆ ರಾಜಕಾಲುವೆ ಒತ್ತುವರಿ ಸರ್ವೆ ಮಾಡಿರುವ ಅಧಿಕಾರಿಗಳು ಗುರುತಿಸಿರುವ ಒತ್ತುವರಿ ಜಾಗಗಳನ್ನು ಇಂದು ತೆರವುಗೊಳಿಸಲಾಗುವುದು. ಕೆಲವರು ಈಗಾಗಲೇ ಕೋರ್ಟ್ನಿಂದ ತೆರವು ನಿರ್ಬಂಧಿಸಿ ತಡೆಯಾಜ್ಞೆ ತಂದಿದ್ದಾರೆ. ಅಂಥ ಕಟ್ಟಡಗಳನ್ನು ಹೊರತುಪಡಿಸಿ, ಉಳಿದ ಕಟ್ಟಡಗಳ ತೆರವಿಗೆ ಬಿಬಿಎಂಪಿ ನಿರ್ಬಂಧಿಸಿದೆ.
ಯಲಹಂಕ ವಲಯದಲ್ಲಿ ಆಮೆಗತಿ ಕಾರ್ಯಾಚರಣೆ
ಯಲಹಂಕ ವಲಯದಲ್ಲಿ ಈವರೆಗೆ ಕೇವಲ 5 ಸ್ಥಳಗಳಲ್ಲಿ ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆಯಾದರೂ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಪಾಲಿಕೆ ಅಧಿಕಾರಿಗಳು ಮಾಡಿರುವ ಸರ್ವೆ ಪ್ರಕಾರ ಯಲಹಂಕದ 96 ಕಡೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಕೇವಲ ಒಂದು ದೊಡ್ಡ ರಾಜಕಾಲುವೆ ಒತ್ತುವರಿ ತೆರವು ಬಿಟ್ಟರೆ ಉಳಿದೆಡೆ ತೂಬುಗಾಲುವೆ ಒತ್ತುವರಿ ತೆರವಿನಲ್ಲೇ ಕಾಲಹರಣ ಮಾಡಲಾಗುತ್ತಿದೆ. ಸಿಂಗಾಪುರ ಕೆರೆ ಸುತ್ತಮುತ್ತ ಮಾತ್ರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಯಲಹಂಕದ ವಿವಿಧೆಡೆ ಎಷ್ಟು ಕಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ ಎಂದು ಜನರು ಪ್ರಶ್ನಿಸಿದ್ದಾರೆ.
ಎಲ್ಲಿ ಎಷ್ಟು ಒತ್ತುವರಿ ತೆರವು
ಸೆ 13ರಂದು ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್ಸಿಬಿಎಸ್ ಇನ್ಸ್ಟಿಟ್ಯೂಟ್ನಿಂದ 120 ಮೀಟರ್ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗಿದೆ. ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದ ಕಾಂಪೌಂಡ್ ಗೋಡೆಯನ್ನು ಪಾಲಿಕೆ ತೆರವುಗೊಳಿಸಿತ್ತು. ಸೆ 14ರಂದು ಸಿಂಗಾಪುರ ಗ್ರಾಮದಲ್ಲಿ ಬಾಲನ್ ಗ್ರೂಪ್ನಿಂದ (ಜ್ಯೂಸ್ ಫ್ಯಾಕ್ಟರಿ) 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗದಲ್ಲಿ ಒತ್ತುವರಿ ತೆರವುಗೊಳಿಸಲಾಗಿತ್ತು. ಸಿಂಗಾಪುರದ ಕಮಾಂಡೋ ಗ್ಲೋರಿ ಅಪಾರ್ಟ್‌ಮೆಂಟ್ ಹಿಂಭಾಗ ಸರ್ವೇ ನಂ 97 ಹಾಗೂ ಸರ್ವೆ ನಂ 100ರಲ್ಲಿ 2.4 ಮೀ ಅಗಲ ಹಾಗೂ 200 ಮೀ ಉದ್ದದ ತೂಬುಗಾಲುವೆ ಒತ್ತುವರಿ ತೆರವು ಮಾಡಲಾಗಿತ್ತು. ಸಿಂಗಾಪುರದ ಡ್ರೀಮ್ ಲ್ಯಾಂಡ್ ಮಾರ್ಕ್ ಅಪಾರ್ಟ್ಮೆಂಟ್ನಿಂದ 2.4 ಅಗಲ, 75 ಮೀ ಉದ್ದದ ತೂಬುಗಾಲುವೆ ಒತ್ತುವರಿಯನ್ನು ಅರ್ಧದಷ್ಟು ತೆರವುಗೊಳಿಸಲಾಗಿದೆ.
ಸೆ.15 ರಂದು ಸಿಂಗಾಪುರದ ಡ್ರೀಮ್ ಲ್ಯಾಂಡ್ ಮಾರ್ಕ್ ಅಪಾರ್ಟ್ಮೆಂಟ್ನಿಂದ 2.4 ಅಗಲ, 75 ಮೀ ಉದ್ದದ ತೂಬುಗಾಲುವೆ ಒತ್ತುವರಿಯನ್ನು ಅರ್ಧದಷ್ಟು ತೆರವುಗೊಳಿಸಲಾಗಿದೆ. ಸಿಂಗಾಪುರದ ಸರ್ವೇ ನಂಬರ್ 94-95ರಲ್ಲಿ ತೂಬುಗಾಲುವೆ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿರುವ ಆರೋಪ ಕೇಳಿಬಂದಿದೆ. ಒತ್ತುವರಿಯಾಗಿರುವ ತೂಬುಗಾಲುವೆ ತೆರವುಗೊಳಿಸುವ ಪ್ರಯತ್ನದಲ್ಲಿಯೇ ನಿನ್ನೆ ಇಡೀ ದಿನ ಅಧಿಕಾರಿಗಳು ನಿರತರಾಗಿದ್ದರು.