ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಶ್ರೀ ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ
Edited By:

Updated on: Dec 29, 2021 | 11:18 AM

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್​ ಮೂಲಕ ಹೇಳಿದ್ದಾರೆ.

ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಶ್ರೀ ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ ಸತ್ಯಕ್ಕೆ ನಾಲಿಗೆ ಪ್ರಮೇಯವೇ ಇಲ್ಲ. ಸತ್ಯ ಸತ್ಯವೇ. ದೇವೇಗೌಡರು ಅಂತಹ ಸತ್ಯದ ಸಾಕ್ಷಿ. ನೀರಾವರಿಗಾಗಿ ಅವರು ಅವಿರತವಾಗಿ ಶ್ರಮಿಸಿ ನಡೆದಾಡಿದ ನೆಲದ ಮಣ್ಣಿನಮಕ್ಕಳ ನಂಬಿಕೆಯನ್ನೇ ಬುಲ್ಡೋಜ್ ಮಾಡುವಂಥ ರಾಜಕಾರಣ ʼಕೈʼ ಪಕ್ಷ ಮಾಡುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ನ್ಯಾಯಯುತ ಪಾಲು, ಕಾವೇರಿ 4ನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಒತ್ತಡಕ್ಕೆ ಮಣಿದು ತಡೆದಿತ್ತು ಕಾಂಗ್ರೆಸ್. ಆಗ ಪಿ.ವಿ.ನರಸಿಂಹರಾವ್ ಪ್ರಧಾನಿ. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಮತಯಾತ್ರೆಗೆ ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಆಗ ಸಿಎಂ ಆಗಿದ್ದ ಗೌಡರನ್ನು ತಡೆದ ಪಕ್ಷಕ್ಕೆ ಪ್ರಧಾನಿಯಾದ ಗೌಡರನ್ನು ತಡೆಯಲು ಧೈರ್ಯ ಸಾಲಲಿಲ್ಲ. ಕಾಂಗ್ರೆಸ್ ಕುತ್ಸಿತತನದಿಂದ ತಡೆಯಲ್ಪಟ್ಟಿದ್ದ 9 ಟಿಎಂಸಿ ನೀರು ರಾಜ್ಯಕ್ಕೆ ದಕ್ಕುವ ಯೋಜನೆಗೆ ಮಣ್ಣಿನಮಗ ಎದೆಗುಂದದೆ ಹಸಿರುನಿಶಾನೆ ತೋರಿದ್ದರು. ಜಪಾನ್​ನಿಂದ ಹಣವನ್ನೂ ತಂದರು ಎಂದು ಹೆಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಜೀವಜಲ ತಂದು ಬವಣೆ ನೀಗಿಸಿದವರು ಅವರೇ. ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ಕೃತಘ್ನ ರಾಜಕಾರಣಕ್ಕೆ ಏನು ಹೇಳುವುದು? ಕಾಂಗ್ರೆಸ್​ನ 5 ವರ್ಷದ ಸರಕಾರವೇ ಇತ್ತು. ಸಿದ್ದಹಸ್ತರೇ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಆಗ ಗಾಂಧೀಜಿ ಪ್ರತಿಮೆ ಮುಂದೆ ಉಪವಾಸ ಕೂತ ಮಣ್ಣಿನಮಗನ ಖದರಿಗೆ ಕೇಂದ್ರವೇ ನಡುಗಿತ್ತು. ದಿಲ್ಲಿಯಿಂದ ಮಂತ್ರಿಗಳು ಓಡಿಬಂದರು. ಅದೆಲ್ಲವನ್ನೂ ಕಾಂಗ್ರೆಸ್ ಮರೆತಿದೆಯಾ? ಎಂದು ಟ್ವೀಟ್​ ಮೂಲಕ ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ಹೌದು. ಜಾಣ ಮರೆವು ಕೂಡ ಒಂದು ರೋಗ. ಮಲತಾಯಿ ದೋರಣೆಯೇ ಮೈವೇತ್ತ ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ಉತ್ತರಕುಮಾರ ಸಿದ್ದಸೂತ್ರಧಾರ, ಈಗೇನು ಮಾಡಲು ಸಾಧ್ಯ? ಆದರೆ ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ ಎಂದು ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಇಲ್ಲಿ 30 ವರ್ಷ ಆಳಿದವರು ಕಾವೇರಿ-ಕೃಷ್ಣಾ ವಿಚಾರದಲ್ಲಿ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು ಹೋಗಿ ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ. ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ದೇವೇಗೌಡರು ಕೃಷ್ಣೆ, ಕಾವೇರಿ ಕೊಳ್ಳದಲ್ಲಿ ಮಾಡಿದ ಸಾಧನೆಗಳನ್ನು ತಿಳಿಯಲು ಇತಿಹಾಸದ ಪುಟಗಳನ್ನು ತೆರೆದು ನೋಡಬೇಕು. ಈಗ ಬೇಕಿರುವುದು ತಾಂತ್ರಿಕವಾಗಿ ಮೇಕೆದಾಟು ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಒಪ್ಪಿಗೆ ಪಡೆಯಲು ಹೋರಾಟ ನಡೆಸಬೇಕು. ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯ ಇಲ್ಲ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಪಾಪ ತೊಳೆಯುವ ತಾಯಿ ಲೋಕಪಾವನಿ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ. ನೀರಿನ ಮುಂದೆ ಕಪಟ ನಾಟಕ ಮಾಡುವ ಸಿದ್ದಹಸ್ತ, ಡಿಸೈನ್ ಶೂರರಿಗೆ ಮುಂದೆ ಕಾದಿದೆ ಶಾಸ್ತಿ. ಭೂತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನೇ ನುಂಗಿದ ರಕ್ಕಸ ರಾಜಕಾರಣದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೂ ಬಿದ್ದಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ನಿಮ್ಮ ಬ್ರೂಟಸ್ ಬುದ್ಧಿ, ಸರಕಾರವನ್ನೇ ಸ್ವಾಹ ಮಾಡಿದ ಸಿದ್ಧಕಲೆಯ ಬಗ್ಗೆ 2018ರಲ್ಲೇ ನನಗೆ ಅರಿವಾಯಿತು. ಕೈ ಚಿಹ್ನೆ ಇಟ್ಟುಕೊಂಡು ಕಂಡೋರ ಮೇಲೆ ʼಕೈʼ ಇಡುವ ಭಸ್ಮಾಸುರ ರಾಜಕಾರಣದ ಅನುಭವ ನನಗೂ, ದೇವೇಗೌಡರಿಗೂ ಆಗಿದೆ. ಈ ಪಾದಯಾತ್ರೆ ಯಿಂದ ಜನರಿಗೇನು ಸಂದೇಶ ನೀಡುತ್ತಿದ್ದೀರಿ ಎಂದು ಹೆಚ್​.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:
ಕನ್ನಡಿಗರ ಬಗ್ಗೆ ಕಠಿಣತೆ ಏಕೆ?- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಬೇಸರ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಗಿಂತ ಹೆಚ್ಚು ಸ್ಥಾನ ಗೆದ್ದರೆ ಟ್ವೀಟರ್​ ಬಳಕೆ ನಿಲ್ಲಿಸುವೆ: ಪ್ರಶಾಂತ್ ಕಿಶೋರ್

 

Published On - 11:05 am, Wed, 29 December 21