ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ(Bengaluru karaga) ಕುರಿತು ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್( NA Haris) ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಹ್ಯಾರಿಸ್, ಬೆಂಗಳೂರು ಕರಗ ಬಗ್ಗೆ ಹಗುರ ಭಾಷೆ ಬಳಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದಕ್ಕೆ ಆಕ್ರೋಶಗಳು ವ್ಯಕ್ತವಾಗುವ ಮುನ್ಸೂಚನೆಗಳು ಸಿಗುತ್ತಿದ್ದಂತೆಯೇ ಎಚ್ಚೆತ್ತ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ರೌಡಿ ಶೀಟರ್ ಎದುರು ಕೈ ಮುಗಿದು ನಿಂತ ಮೋದಿ: ಫೋಟೋ ವೈರಲ್, ಕಾಂಗ್ರೆಸ್ ವಾಗ್ದಾಳಿ
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹ್ಯಾರಿಸ್, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಹೀಗೆ ಮಾತನಾಡುತ್ತಿದ್ದ ವೇಳೆ ಆಡಳಿತ ಪಕ್ಷದವನ್ನು ಟೀಕಿಸುವ ಭರದಲ್ಲಿ ‘ಅವರು ನಾಟಕ ಮಾಡುತ್ತಿದ್ದಾರೆ, ಇದೊಂದು ಎರಡು ತಿಂಗಳು ನಾಟಕದ ಟೈಮ್, ಹಬ್ಬಕ್ಕೆ ಕರಗ ಟೈಮ್ನಲ್ಲೆಲ್ಲ ಹಾಕೊಂಡು ಬರ್ತಾರಲ್ಲ, ಅದೇ ಥರ ಇವರೆಲ್ಲ ಈಗ ಓಡಾಡುತ್ತಿರೋದು ಎಂದು ಹೇಳಿದ್ದರು. ಹೀಗಾಗಿ ಹ್ಯಾರಿಸ್ ಹೇಳಿಕೆಯನ್ನು ಖಂಡಿಸಿ ಇಂದು ಭಾರಿ ಪ್ರತಿಭಟನೆ ನಡೆಸಲು ಕರಗ ಉತ್ಸವ ಮಂಡಳಿ ಸಿದ್ಧತೆ ಮಾಡಿಕೊಂಡಿತ್ತು.
ಇದರ ಸುಳಿವು ಸಿಗುತ್ತಿದ್ದಂತೆ ಹ್ಯಾರಿಸ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ನಾನು ಆ ರೀತಿ ಏನೂ ಹೇಳಿಲ್ಲ. ನನ್ನ ಮಾತನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಾಗ್ಯೂ ನಿಮಗೆ ಯಾರಿಗೂ ನೋವಾಗಬಾರದು, ತಪ್ಪು ಭಾವಿಸಬಾರದು. ನಾನು ಆ ರೀತಿ ಯಾವತ್ತೂ ಹೇಳಲ್ಲ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹ್ಯಾರಿಸ್ ಹೇಳಿಕೆ ಖಂಡಿಸಿ ಪ್ರತಿಭಟನೆ ಸಲುವಾಗಿ ಕರೆದಿದ್ದ ಸುದ್ದಿಗೋಷ್ಠಿ ರದ್ದಾಗಿದೆ ಎಂದು ತಿಳಿದುಬಂದಿದೆ.
Published On - 9:43 am, Mon, 13 March 23