ಬೆಂಗಳೂರು: ವಿಧಾನಸಭೆ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು ಸದನದಲ್ಲಿ ಧರಣಿ ಮುಂದುವರಿಸಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ. ವಿಧಾನಸಭೆ ಪುನರಾರಂಭವಾದ ನಂತರ ಕಾಂಗ್ರೆಸ್ ಶಾಸಕರು ರಾಷ್ಟ್ರಧ್ವಜ ಹಿಡಿದು ಕಲಾಪಕ್ಕೆ ಹಾಜರಾದರು. ಈಶ್ವರಪ್ಪ ವಿರುದ್ಧ ಬಿಗಿ ನಿಲುವು ತಾಳಲು ನಿರ್ಧರಿಸಿರುವ ಕಾಂಗ್ರೆಸ್ ಸದಸ್ಯರು ಒಕ್ಕೊರಲಿನಿಂದ ಪ್ರತಿಭಟನೆಗೆ ಮುಂದಾದರು. ಇದಕ್ಕೂ ಮೊದಲು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಲುವಳಿ ಸೂಚನೆ ಸಂಬಂಧ ಎರಡೂ ಪಕ್ಷದ ಶಾಸಕರ ಸಂಧಾನ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಯು.ಟಿ.ಖಾದರ್, ಬಿ.ಎಂ.ಬಿ.ಎಂ.ಪಾಟೀಲ್ ಹಾಜರುಪಡಿಸಿದರು.
ವಿಧಾನಸಭೆಯಲ್ಲಿ ರಾಷ್ಟ್ರಧ್ವಜ ಹಿಡಿದು ಸದನದ ಬಾವಿಗೆ ಇಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ದೇಶದ್ರೋಹಿ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಹಿಸಿದರು. ಕಾಂಗ್ರೆಸ್ ಪಕ್ಷದಿಂದ ಧ್ವಜ ಸಂಹಿತೆ ಉಲ್ಲಂಘನೆ ಆಗಿದೆ. ಅವರು ರಾಷ್ಟ್ರಧ್ವಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಧ್ವಜಕ್ಕೆ ಈ ರೀತಿ ಅವಮಾನ ಮಾಡುವುದು ದೇಶದ್ರೋಹ ಎಂದರು. ಸದನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.
ಸದನದಲ್ಲಿ ಧ್ವಜ ಹಿಡಿದು ವಿಪಕ್ಷ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದರು. ವಿಪಕ್ಷ ಕಾಂಗ್ರೆಸ್ ನಿಯಮ 60ರ ಅಡಿ ನೀಡಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದರು. ರಾಷ್ಟ್ರಧ್ವಜಕ್ಕೆ ಎಂದೂ ಇವರು (ಕಾಂಗ್ರೆಸ್) ಗೌರವ ಕೊಟ್ಟಿಲ್ಲ. ಹುಬ್ಬಳ್ಳಿಯಲ್ಲಿ ಆರು ಜನರನ್ನು ಗೋಲಿಬಾರ್ ಮಾಡಿ ಕಗ್ಗೊಲೆ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷಕ್ಕೆ ನಿಲುವಳಿ ಪ್ರಸ್ತಾಪ ಮಂಡಿಸಲು ಸ್ಪೀಕರ್ ಅವಕಾಶ ನೀಡಿದರು. ತಾವು ಮಂಡಿಸಲು ಉದ್ದೇಶಿಸಿದ್ದ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಧಿಕ್ಕಾರ ಕೂಗಿದರು.
ಕಾಂಗ್ರೆಸ್ನವರು ಸದನದಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ರಾಜಕಾರಣಕ್ಕಾಗಿ ರಾಷ್ಟ್ರಧ್ವಜ ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ವಿಫಲವಾಗಿದೆ. ಇಂತಹ ವರ್ತನೆಗಳಿಂದ ಕಾಂಗ್ರೆಸ್ ದೇಶದಲ್ಲಿ ನೆಲಕಚ್ಚುತ್ತಿದೆ. ರಾಜಕಾರಣಕ್ಕೆ ರಾಷ್ಟ್ರಧ್ವಜ ಬಳಸಿಕೊಂಡಿದ್ದು ಖಂಡನೀಯ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಪ್ರತಿಭಟನೆಯಲ್ಲಿ ಮನಸ್ಸಿಗೆ ಬಂದಂತೆ ಧ್ವಜ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ನವರಿಗೆ ಯಾವಾಗಿಂದ ಧ್ವಜದ ಬಗ್ಗೆ ಗೌರವ ಬಂತು? ನಾನು ಈಶ್ವರಪ್ಪನವರಿಗೆ ಧನ್ಯವಾದವನ್ನು ಹೇಳುತ್ತೇನೆ. ನಿಮ್ಮಿಂದಾಗಿ ಕಾಂಗ್ರೆಸ್ನವರು ಧ್ವಜ ಹಿಡಿಯುವಂತಾಯಿತು. ಅವರೂ ಭಾರತ್ ಮಾತಾಕೀ ಜೈ ಅಂದ್ರು ಎಂದರು.
ವಿಧಾನ ಪರಿಷತ್ ಕಲಾಪ ಮುಂದೂಡಿಕೆ
ವಿಧಾನ ಪರಿಷತ್ನಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ (ಫೆ 17) ಬೆಳಿಗ್ಗೆ 10.30ಕ್ಕೆ ಮುಂದೂಡಲಾಯಿತು. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್ ವ್ಯವಸ್ಥೆ ಸುಧಾರಣೆಗೆ ಬೇಡಿಕೆ
Published On - 5:21 pm, Wed, 16 February 22