ಬೆಂಗಳೂರು, (ಏಪ್ರಿಲ್ 10): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಾವು ಜೋರಾಗಿದೆ. ಈ ವೇಳೆ ಬೆಂಗಳೂರಿನ ವೈಯ್ಯಾಲಿಕಾವಲ್‌ನ ಕರ್ನಲ್ ವಸಂತ್ ಕ್ರೀಡಾಂಗಣದಲ್ಲಿ ಆರ್‌ಎಸ್‌ಎಸ್ (RSS) ವತಿಯಿಂದ ಇಂದು ( ಏಪ್ರಿಲ್ 9) ಆಯೋಜನೆ ಮಾಡಲಾಗಿರುವ ಯುಗಾದಿ ಉತ್ಸವ (Ugadi Festival) ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿ ಕಾರ್ಯಕ್ರಮ ಹೇಗೆ ಮಾಡಲು ಅನುಮತಿ ನೀಡಲಾಗಿದೆ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ. ಇದರಿಂದ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಪೆಂಡಾಲ್ ಹಾಗೂ ಮೈಕ್ ಅನ್ನು ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳು ತೆಗೆಸಿದ್ದು, ಕಾರ್ಯಕ್ರಮ ಮುಂದುರೆದಿದೆ. ಇನ್ನು ಮುನ್ನಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕ್ರೀಡಾ ಕಾರ್ಯಕ್ರಮಕ್ಕೆ ಅನುಮತಿ ಪಡೆದು ಆರ್‌ಎಸ್‌ಎಸ್ ಕಾರ್ಯಕ್ರಮ ಮಾಡಲಾಗುತ್ತಿದೆ. ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೇವಾರ್ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಬಿಬಿಎಂಪಿ ವಿರುದ್ಧ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ಕಿಡಿಕಾರಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಯಪಾಲಕ ಅಭಿಯಂತರ ಜಯಶಂಕರ್ ಅನುಮತಿ ನೀಡಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ಅನುಮತಿ ಕೊಟ್ಟಿರುವ ಬಗ್ಗೆ ಹೇಳುತ್ತಿದ್ದಾರೆ. ಇಇ ಜಯಶಂಕರ್ರನ್ನು ನಾವು ಕೇಳಿದ್ರೆ ಅನುಮತಿ ನೀಡಿಲ್ಲ ಅಂತಿದ್ದಾರೆ. ಹಾಗಾದರೆ ಇವರು ಫೋರ್ಜರಿ ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ ಅನೂಪ್ ಅಯ್ಯಂಗಾರ್, ಮೈದಾನದಲ್ಲಿ ಸ್ಟೇಜ್ ಹಾಕಿ ಆರ್‌ಎಸ್‌ಎಸ್ ಕಾರ್ಯಕ್ರಮ ಮಾಡುತ್ತಿದ್ದಾರೆ ನಾವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಮಾತ್ರ ಪ್ರಶ್ನಿಸುತ್ತಿದ್ದೇವೆ. RSS ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದ ಎಎ ಅಮಾನತು ಮಾಡಬೇಕು. ಇಇ ಜಯಶಂಕರ್ ಅಮಾನತು ಮಾಡದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಅನುಮತಿಗೆ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಹೇಗೆ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಬಗ್ಗೆ ವಾಗ್ದಾದವಾಗುತ್ತಿದ್ದಂತೆಯೇ ಸ್ಥಳಕ್ಕೆ ಕಾಂಗ್ರೆಸ್ ಯೂತ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಭೇಟಿ ನೀಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಲಪಾಡ್, ನಾವು ಕಾರ್ಯಕ್ರಮ ಮಾಡಲು ಕೆಲ ದಿನಗಳ ಹಿಂದೆ ಮನವಿ ಮಾಡಿದ್ದೆವು. ಆದರೆ, ನೀತಿ ಸಂಹಿತೆ ಇರುವುದರಿಂದ ಅನುಮತಿ ಕೊಡಲಿಲ್ಲ. ಅಲ್ಲದೆ, ಭಾನುವಾರ ಆಟದ ಮೈದಾನವು ಆಟಕ್ಕೆ ಮಾತ್ರ ಮೀಸಲು ಎಂಬ ನಿಯಮ ಇದೆ. ಹೀಗಾಗಿ ನಾವು ಬಿಬಿಎಂಪಿ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಚುನಾವಣಾ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಕಾರ್ಯಕ್ರಮ ನಡೆಸಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದೇವೆ. ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು.