ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಪಿಲ್ಲರ್ ಬಿದ್ದು ತಾಯಿ-ಮಗು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಜ.10) ಗೃಹ ಕಚೇರಿ ಕೃಷ್ಣಾದಲ್ಲಿ ಮೆಟ್ರೊ ಎಂಡಿ, ಬೆಂಗಳೂರು ನಗರ ಪೊಲಿಸ್ ಆಯುಕ್ತ ಹಾಗೂ ಡಿಸಿಪಿ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಬಿಎಂಆರ್ಸಿಎಲ್ನ (BMRCL) ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆದೇಶ ಹೊರಡಿಸಿದ್ದಾರೆ. ಹಾಗೇ ದುರಂತಕ್ಕೆ ಕಾರಣರಾದವರ ವಿರುದ್ಧ, ಎನ್ಸಿಸಿ ಕಂಪನಿ ಮುಖ್ಯಸ್ಥರ ವಿರುದ್ಧ, ಮೆಟ್ರೋ ಕಂಟ್ರ್ಯಾಕ್ಟರ್, ಅವರ ಇಂಜಿನಿಯರ್ಗಳ ವಿರುದ್ಧವೂ ಕ್ರಮಿನಲ್ ಕೇಸ್ ದಾಖಲಿಸುವಂತೆ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂಥ ಘಟನೆ ಮತ್ತೆ ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಿರುವೆ. ತನಿಖೆ ಯಾವ ರೀತಿ ನಡೆಸಬೇಕೆಂದು ನಾಳೆ ತೀರ್ಮಾನಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೆಟ್ರೋ ಕಡೆಯಿಂದ, ನಮ್ಮ ಕಡೆಯಿಂದ ಪರಿಹಾರ ನೀಡಿದ್ದೇವೆ. ಆದರೆ ಪರಿಹಾರ ನೀಡುವುದು ಮುಖ್ಯವಲ್ಲ. ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ: ಐವರ ವಿರುದ್ಧ ಕೇಸ್ ಬುಕ್
ಸಭೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳವಂತೆ ಹೇಳಿದ್ದೇನೆ. ಹಿರಿಯ ಅಧಿಕಾರಿಗಳು ಮುಖ್ಯಸ್ಥರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಸಸ್ಪೆಂಡ್ ಮಾಡುವುದಕ್ಕೆ ಹೇಳಿದ್ದೀನಿ. ಕಾಂಟ್ರಾಕ್ಟ್ರ್ ಕಂಪನಿಯವರ ಮೇಲೆ ಕೇಸ್ ದಾಖಾಲಿಸುವುದಕ್ಕೆ ಹೇಳಿದ್ದೇನೆ ಎಂದರು.
ಘಟನೆ ಹಿನ್ನೆಲೆ
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ಬೆಳಿಗ್ಗೆ 10:30 ರ ಸುಮಾರಿಗೆ ಘಟನೆ ನಡೆದಿದ್ದು, ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ ದುರ್ದೈವಿಗಳು. ಗಂಭೀರ ಸ್ಥಿತಿಯಲ್ಲಿರುವ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್‌ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿದೆ.
ಬೆಂಗಳೂರಿನ ಕಲ್ಯಾಣ್‌ನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೊ ರೈಲು ಪಿಲ್ಲರ್ ಕುಸಿದು ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ ಹಾಗೂ ಅವರ ಇಬ್ಬರು ಪುತ್ರರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್ ತಾಯಿ ಮತ್ತು ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Tue, 10 January 23