Covid 19 Live Updates: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದೇಶಿ ವೈರಸ್ ಸೋಂಕಿನ ಆತಂಕ ದಿನದಿನಕ್ಕೂ ಹೆಚ್ಚಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ನಾಲ್ಕೇ ದಿನದಲ್ಲಿ ವಿದೇಶದಿಂದ ಬೆಂಗಳೂರಿಗೆ ಬಂದ 19 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆವರೆಗೂ 12 ಮಂದಿಗೆ ಕೊರೊನಾ ಅಟ್ಯಾಕ್ ಆಗಿತ್ತು. ಇಂದು ಏಳು ಮಂದಿಗೆ ವೈರಸ್ ಅಂಟಿರೋದು ಪತ್ತೆ ಆಗಿದೆ. ಹೀಗಾಗಿ ಬೆಂಗಳೂರಿಗೆ ವಿದೇಶಿ ಪ್ರಯಾಣಿಕರೇ ಎಲ್ಲಿ ಕಂಟಕವಾಗ್ತಾರೋ ಅನ್ನೋ ಭಯ ಕಾಡ್ತಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ. ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಹೊಸ ವರ್ಷಾಚರಣೆ ಹೊಸ್ತಿಲಲ್ಲಿರುವುದರಿಂದ ಪೊಲೀಸರು ಭದ್ರತೆ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಬನ್ನಿ ಕೊರೊನಾ, ಹೊಸ ವರ್ಷಾಚರಣೆ ಸಂಬಂಧ ರಾಜ್ಯದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಎಲ್ಲಾ ರೀತಿಯ ಬೆಳವಣಿಗೆಗಳ ಬಗ್ಗೆ ಕೊರೊನಾ ಲೈವ್ ಮೂಲಕ ತಿಳಿದುಕೊಳ್ಳಿ.
ಬೆಂಗಳೂರಿನ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆ ದಾಸ್ತಾನಿಲ್ಲದಿರುವುದು ತಿಳಿದುಬಂದಿದೆ. ಬೂಸ್ಟರ್ ಡೋಸ್ ತಗೆದುಕೊಳ್ಳಲು ಮುಂದಾದ ಜನರಿಗೆ ಲಸಿಕೆ ಕೊರತೆಯ ಬಿಸಿ ತಟ್ಟಿದೆ. ಹಲವೆಡೆ ಕೋವಿಶೀಲ್ಡ್ ಲಸಿಕೆ ಲಭ್ಯ ಇಲ್ಲದ ಹಿನ್ನಲೆಯಲ್ಲಿ ಪರ್ಯಾಯವಾಗಿ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲಾಗುತ್ತಿದೆ. ಕೋವಿಶಿಲ್ಡ್ ಪಡೆದವರು ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜನ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೇ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುತ್ತಿದ್ದಾರೆ. ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳೂ ಮಾಸ್ಕ್ ಧರಿಸದೇ ಗುಂಪುಗೂಡಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿವೆ.
ವಿಜಯಪುರ ತರಕಾರಿ ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಕಂಡುಬಂದಿದೆ. ಜನರು ನಿಯಮ ಉಲ್ಲಂಘಿಸಿ, ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡುತ್ತಿರುವುದು ಕಾಣಿಸಿದೆ. ಕೆಲವೊಬ್ಬರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ ಉಳಿದಂತೆ ಜನರು ಗುಂಪುಗುಂಪಾಗಿ ಓಡಾಡುತ್ತಿದ್ದಾರೆ.
ಕೊಡಗಿನಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಮಾಸ್ಕ್ ಇಲ್ಲ, ಸೋಷಿಯಲ್ ಡಿಸ್ಟೇನ್ಸ್ ಎಲ್ಲೂ ಕಂಡು ಬರುತ್ತಿಲ್ಲ. ಸ್ಥಳೀಯರು, ಪ್ರವಾಸಿಗರಿಂದಲೂ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗುತ್ತಿದೆ.
ಹಾಸನದಲ್ಲೂ ಸರ್ಕಾರದ ಮಾಸ್ಕ್ ರೂಲ್ಸ್ಗೆ ಜನ ಡೋಂಟ್ ಕೇರ್. ಹಾಸನ ನಗರದ ಬಸ್ ನಿಲ್ದಾಣದಲ್ಲಿ ಮಾಸ್ಕ್ ಇಲ್ಲದೆ ಜನರ ಓಡಾಟ ಕಂಡು ಬರುತ್ತಿದೆ. ಸಾವಿರಾರು ಜನರು ಸೇರೋ ಪ್ರದೇಶದಲ್ಲಿ ಕೊರೊನಾ ನಿಯಮ ಪಾಲನೆಯಾಗುತ್ತಿಲ್ಲ. ಸಾರಿಗೆ ಬಸ್ ನಲ್ಲಿ ನೂರಾರು ಸಂಖ್ಯೆಯಲ್ಲಿ ನೂಕು ನುಗ್ಗಲಿನ ನಡುವೆ ಜನರು ಸಂಚರಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಬೇಕೆಂಬ ನಿಯಮಕ್ಕೆ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಕೊವಿಡ್ ನಿಯಂತ್ರಣಕ್ಕೆ ದಾವಣಗೆರೆ ಜಿಲ್ಲಾಡಳಿತ ಸಜ್ಜಾಗಿದೆ. ಕೊವಿಡ್ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗಸೂಚಿ ಬಂದ ಹಿನ್ನೆಲೆ ಡಿಸಿ ಶಿವಾನಂದ ಕಾಪಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 644 ಖಾಸಗಿ ಆಸ್ಪತ್ರೆ ಗಳಲ್ಲಿ 1088 ಬೆಡ್ ಗಳು ಲಭ್ಯವಿದೆ. 36 ಬಗೆಯ ಔಷಧಿಗಳು ಲಭ್ಯ. ಈಗಾಗಲೇ ಜಿಲ್ಲೆಯ ಶೇ.24ರಷ್ಟು ಜನರಿಗೆ ಬೂಸ್ಟರ್ ಡೋಸ್ ಆಗಿದೆ. ಇನ್ನೂ ಆರು ಲಕ್ಷ ಜನಕ್ಕೆ ಬೂಸ್ಟರ್ ಡೋಸ್ ಕೊಡಬೇಕಾಗಿದೆ ಎಂದು ಸಭೆ ಬಳಿಕ ಜಿಲ್ಲಾಧಿಕಾರಿ ಕಾಪಶಿ ಮಾಹಿತಿ ನೀಡಿದರು.
ಎನ್ 95 ಮಾಸ್ಕ್ ಹಾಕಲೇ ಬೇಕು. ಚಿತ್ರಮಂದಿರಗಳಿಗೆ ಹೋಗುವ ಪ್ರತಿಯೊಬ್ಬರು ಎನ್ 95 ಮಾಸ್ಕ್ ಹಾಕುವುದು ಕಡ್ಡಾಯ. ಈ ವಿಚಾರವಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಪ್ರತಿ ಚಿತ್ರಮಂದಿರದ ಮಾಲೀಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಡಿಸಿ ಸೂಚನೆ.
ಕಡ್ಡಾಯ ಮಾಸ್ಕ್ ರೂಲ್ಸ್ ಜಾರಿಗೆ ತಂದರೂ ಗದಗ ಸೇರಿದಂತೆ ಅನೇಕ ಕಡೆ ಜನ ಮಾಸ್ಕ್ ಹಾಕದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬೆಂಗಳೂರಿನ ಬಿಎಂಟಿಸಿಯಲ್ಲಿ ಪ್ರಯಾಣಿಕರು, ಸಿಬ್ಬಂದಿ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಕೋಟೆನಾಡಿನಲ್ಲಿ ಡೋಂಟ್ ಕೇರ್. ಚಿತ್ರದುರ್ಗದ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೆ ಅಲಕ್ಷ. ತರಕಾರಿ ವ್ಯಾಪಾರಿಗಳು, ಗ್ರಾಹಕರು ಮಾಸ್ಕ್ ಧರಿಸದೆ ನಿರ್ಲಕ್ಷ.
ಕೊವಿಡ್ ನಿಯಮಾವಳಿಯ ಆದೇಶ ಆಗಿ ಎರಡು ದಿನ ಕಳೆದರೂ ಕರಾವಳಿಯಲ್ಲಿ ಇನ್ನು ಕೂಡ ಕೊರೊನಾ ನಿಯಮ ಪಾಲನೆ ಆಗ್ತಾಯಿಲ್ಲ. ಮಂಗಳೂರಿನಲ್ಲಿ ಜನರು ಮಾಸ್ಕ್ ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಖಾಸಗಿ ಬಸ್ಗಳು ಫುಲ್ ರಶ್ ಆಗಿವೆ. ಬಸ್ ಗಳ ಒಳಗೆ ಕೂಡ ಮಾಸ್ಕ್ ಹಾಕದೇ ಪ್ರಯಾಣಿಸಲಾಗುತ್ತಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ ಕೂಡ ಮಾಸ್ಕ್ ಹಾಕದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಮಾಸ್ಕ ಹಾಕದೇ ಓಡಾಟ.
ಸರ್ಕಾರದ ಆದೇಶಕ್ಕೆ ಬೆಣ್ಣೆ ನಗರಿ ದಾವಣಗೆರೆ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ದಾವಣಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿದ್ದಾರೆ. ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಧರಿಸದೆ ಜನ ಸುತ್ತಾಡುತ್ತಿದ್ದಾರೆ. ಜನರಿಗೆ ತಿಳುವಳಿಕೆ ನೀಡುವಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಬೆಂಗಳೂರು ನಗರದಲ್ಲಿ ಮಾಸ್ಕ್ ಧರಿಸುವಂತೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಕೆ.ಆರ್.ಮಾರ್ಕೆಟ್ನಲ್ಲಿ ಬಿಬಿಎಂಪಿ ಮಾರ್ಷಲ್ಗಳು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾದಿಂದ ಕಾಪಾಡಬೇಕೆಂದು ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿಯಲ್ಲಿರೋ ಶ್ರೀಸದಾಶಿವ ಮುತ್ಯಾರ ಮಠಕ್ಕೆ ಭಕ್ತರು ಹರಿದು ಬರುತ್ತಿದ್ದಾರೆ. ಎರಡನೇ ಅಲೆ ಕೊರೊನಾ ವೇಳೆ ಮಠಕ್ಕೆ ಅಂಬಲಿ ಬಾನ ನೈವೇದ್ಯ ಮಾಡಿದ್ದ ಭಕ್ತರು ಕೊರೊನಾದಿಂದ ಶ್ರೀಮಠ ಎಲ್ಲರನ್ನೂ ಕಾಪಾಡಿದೆ ಎಂದು ಮತ್ತೊಮ್ಮೆ ಕೊರೊನಾ ನಾಲ್ಕನೇ ಅಲೆಯಿಂದಲೂ ಕಾಪಾಡುವಂತೆ ಅಂಬಲಿ ಬಾನ ನೈವೈದ್ಯ ಮಾಡ್ತಿದ್ದಾರೆ. ಮಠದಲ್ಲಿರೋ ಗದ್ದುಗೆಗಳಿಗೆ ಮಧ್ಯ ನೇವೈಧ್ಯ ಮಾಡುತ್ತಿದ್ದಾರೆ, ಮಕ್ಕಳಾದಿಯಾಗಿ ವಯೋವೃದ್ದರೂ ಮಠಕ್ಕೆ ಆಗಮಿಸುತ್ತಿದ್ದಾರೆ. ಸದಾಶಿವ ಸ್ವಾಮಿಗಳು (ಮುತ್ಯಾರು) ಕೊರೊನಾ ಮಹಾಮಾರಿಯ ಬಗ್ಗೆ ಮಠದ ಕಾಲ ಜ್ಞಾನದಲ್ಲಿ ಭವಿಷ್ಯ ನುಡಿದಿದ್ದರು.
ಕಲಬುರಗಿ ನಗರದ ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಕಡೆ ಮಾಸ್ಕ್ ನಿಯಮ ಉಲ್ಲಂಘಟನೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ನಿಯಮಕ್ಕೆ ಡೋಂಟ್ ಕೇರ್. ಮಾಸ್ಕ್ ಇಲ್ಲದೇ ಜನರು ಅಡ್ಡಾಡುತ್ತಿದ್ದಾರೆ. ಮಾಸ್ಕ್ ಇಲ್ಲದೇ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದಾರೆ. ಮಾಸ್ಕ್ ಧರಿಸಿದ್ರೆ ನಮಗೆ ಕೆಲಸ ಮಾಡಲು ಆಗಲ್ಲ. ಉಸಿರು ಹಿಡಿದಂತೆ ಆಗ್ತದೆ, ನಾವು ಮಾಸ್ಕ್ ಧರಿಸಲ್ಲಾ ಎಂತ ಕಾರ್ಮಿಕರು ಹೇಳುತ್ತಿದ್ದಾರೆ.
ಚೀನಾ ಕೊರೊನಾ ಪ್ರಿಡಿಕ್ಷನ್ ದೇಶದ ಆತಂಕ ಹೆಚ್ಚಿಸಿದೆ. ಚೀನಾದಲ್ಲಿ ನಿರ್ಬಂಧಗಳ ತೆರವಿನಿಂದ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಕೊವಿಡ್ ಪರೀಕ್ಷೆಗಳ ಕೈಬಿಟ್ಟಿದ್ದರಿಂದ ಹೊಸ ವೈರಸ್ ಆರ್ಭಟ ಶುರುವಾಗಿದೆ. ಅಮೆರಿಕಾ ವರದಿಯ ಪ್ರಕಾರ ಫೆಬ್ರುವರಿ 2023ರ ವೇಳೆಗೆ ಚೀನಾದಲ್ಲಿ ಕೊವಿಡ್ ಆರ್ಭಟದಿಂದ ಪ್ರಕರಣಗಳಲ್ಲಿ ಹೆಚ್ಚಳವಾಗಲಿದೆ. 800 ಮಿಲಿಯನ್ ಜನರು ಸೋಂಕಿಗೆ ಬಲಿಯಾಗುವ ವರದಿಯನ್ನ ತಜ್ಞರು ನೀಡಿದ್ದಾರೆ. ದಿನವೊಂದಕ್ಕೆ 4ಕೋಟಿ ಜನರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. 10 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗುವ ಬಗ್ಗೆ ವರದಿಯಾಗಿದೆ.
ಕೊರೊನಾ ರೂಪಾಂತರಿಗಳಲ್ಲಿಯೇ BF.7 ಅತಿ ವೇಗವಾಗಿ ಹರಡುವ ವೈರಸ್. BF.7 ರೂಪಾಂತರಿಯ ಆರ್ ವ್ಯಾಲ್ಯೂ ಆತಂಕ ಹುಟ್ಟಿಸಿದೆ. ಕೊರೊನಾ ಉಪ ತಳಿಗಳ ಇತಿಹಾಸದಲ್ಲಿಯೇ BF.7 ರೂಪಾಂತರಿ ಹೆಚ್ಚು ಅಪಾಯಕಾರಿ. BF.7 ರೂಪಾಂತರಿಯ R0 ವ್ಯಾಲ್ಯೂ 18 ರಷ್ಟಿದೆ. 100 ಜನರಿಗೆ BF.7 ವೈರಸ್ ತಗುಲಿದರೆ 1800 ಜನರಿಗೆ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಒಮಿಕ್ರಾನ್ ರೂಪಾಂತರಿಯ ಉಪ ತಳಿಗಳಲ್ಲಿಯೇ BF.7 ಹೆಚ್ಚು ವೇಗವಾಗಿ ಹರಡುವ ವೈರಸ್. ಹೀಗಾಗಿ ತಜ್ಞರು ಆತಂಕ ಹೊರ ಹಾಕ್ತೀದ್ದಾರೆ. ಕೊಂಚ ಯಾಮಾರಿದ್ರೂ ರಾಜ್ಯಕ್ಕೆ ಡೆಡ್ಲಿ ವೈರಸ್ ಬೇಗನೇ ಹರಡುವ ಸಾಧ್ಯತೆ ಇರುತ್ತೆ. ಹೀಗಾಗಿ ಒಮಿಕ್ರಾನ್ ಉಪತಳಿ BF.7 ಹೊಸ ವೈರಸ್ ಬಗ್ಗೆ ಸಾಕಷ್ಟು ಭಯ ಎದುರಾಗಿದೆ.
ವಿದೇಶಗಳಿಂದ ಬರುವ ಪ್ರಯಾಣಿಕರೇ ಬೆಂಗಳೂರಿಗೆ ಹೈರಿಸ್ಕ್. ಬೆಂಗಳೂರಿಗೆ ವಿದೇಶದಿಂದ ಬಂದ 19 ಪ್ರಯಾಣಿಕರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಎಲ್ಲ ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್ ಗೆ ರವಾನಿಸಲಾಗಿದೆ.
24-12-2022 ರವರೆಗೆ 12 ಸೋಂಕಿತರು ಪತ್ತೆ
25-12-2022 ರಂದು 4 ಹೊಸ ಸೋಂಕಿತರು ಪತ್ತೆ
26-12-2022 ರಂದು ನಿನ್ನೆ 3 ಕೇಸ್ ಪತ್ತೆ
ಒಟ್ಟು 19 ಅಂತಾರಾಷ್ಟ್ರೀಯ ಪ್ರಯಾಣಿಕಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ.
ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿ ಕುಡಿದು ಟೈಟಾದವರಿಗೆ ಪೊಲೀಸ್ ಇಲಾಖೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಯುವಕ, ಯುವತಿ ಯಾರೇ ಕುಡಿದು ಟೈಟಾದ್ರೆ ಅವರ ಸುರಕ್ಷತೆಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಈ ಆ್ಯಂಬುಲೆನ್ಸ್ ಮೂಲಕವೇ ಅವರನ್ನು ಮನೆಗೆ ತಲುಪಿಸಲಾಗುತ್ತೆ. ಡಿಸೆಂಬರ್ 31ರ ರಾತ್ರಿ ಮಾತ್ರ ಈ ಸೇವೆ ಇರಲಿದೆ.
ಈ ಮೂಲಕ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ರವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಗ್ನೇಯ ವಿಭಾಗದಲ್ಲಿ ಪಾರ್ಟಿಪ್ರಿಯರ ಸೇಫ್ಟಿಗೆ ಆ್ಯಂಬುಲೆನ್ಸ್ ಸೇವೆಗೆ ಪ್ಲಾನ್ ನಡೆದಿದೆ.
ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ 29 ಜನ, ಮೊನ್ನೆ 22 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಹಂತ ಹಂತವಾಗಿ ಸೋಂಕಿತರು ಏರಿಕೆಯಾಗುತ್ತಿದ್ದು ನ್ಯೂ ಇಯರ್ ನಂತರ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಎರಡು ವರ್ಷದ ನಂತರ ನ್ಯೂಇಯರ್ ಆಚರಣೆ ಹಿನ್ನಲೆ ರೋಡ್ ಸೆಲೆಬ್ರೆಶನ್ ನಲ್ಲಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ. ಬ್ರಿಗೇಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಈ ಬಾರಿ ಹಲವೆಡೆ ಲಕ್ಷಾಂತರ ಮಂದಿ ಸೇರುವ ಮಾಹಿತಿ ಸಿಕ್ಕಿದೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಖಾಕಿ ಹೈಅಲರ್ಟ್. ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಇಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಿಟಿ ರೌಂಡ್ಸ್ ಕೈಗೊಂಡು ಭದ್ರತಾ ಕಾರ್ಯ ಪರಿಶೀಲಿಸಲಿದ್ದಾರೆ. ಹೊಸ ವರ್ಷಾಚರಣೆಗೆ ರಾತ್ರಿ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರಿನ ಪ್ರಮುಖ ಏರಿಯಾಗಳಾದ ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್ ಸೇರಿ ಹಲವೆಡೆ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿರಲಿದೆ. ಹಾಗೂ ಸರ್ಕಾರದ ಕೊರೊನಾ ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರ ವಹಿಸಲಾಗುತ್ತದೆ.
Published On - 8:16 am, Wed, 28 December 22