ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಜಮೀರ್ ಅಹ್ಮದ್‌ಗೆ ಎಐಸಿಸಿ ಬುಲಾವ್
ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಜಮೀರ್ ಅವರನ್ನು ದೆಹಲಿಗೆ ಬಂದು ಭೇಟಿಯಾಗುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಆಹ್ವಾನ ಕೊಟ್ಟಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್(Zameer Ahmed Khan) ಅವರಿಗೆ ಎಐಸಿಸಿ(AICC) ದೆಹಲಿಗೆ ಆಗಮಿಸುವಂತೆ ಕರೆ ಕೊಟ್ಟಿದೆ. ಈ ನಿಟ್ಟಿನಲ್ಲಿ ಇಂದು ಶಾಸಕ ಜಮೀರ್ ಅಹ್ಮದ್ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಜಮೀರ್ ಅವರನ್ನು ದೆಹಲಿಗೆ ಬಂದು ಭೇಟಿಯಾಗುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Singh Surjewala) ಅವರು ಆಹ್ವಾನ ಕೊಟ್ಟಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಶಾಸಕ ಜಮೀರ್ ಅಹ್ಮದ್‌ಗೆ ಎಐಸಿಸಿ ತರಾಟೆಗೆ ತೆಗೆದುಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ. ಅವರೇ ಮುಂದಿನ ಸಿಎಂ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜಮೀರ್ ಅಹ್ಮದ್ಗೆ ಪತ್ರ ಬರೆದು ಈ ರೀತಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಈ ರೀತಿಯ ಬಹಿರಂಗ ಹೇಳಿಕೆಗಳು ನಿಂತಿದ್ದವು. ಇದಾದ ಬಳಿಕ ಶಾಸಕ ಜಮೀರ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ತಮ್ಮ ಮಗನ ಬನಾರಸ್ ಸಿನಿಮಾದಲ್ಲಿ ಬಿಜಿಯಾಗಿದ್ದರು.
ಇದನ್ನೂ ಓದಿ: ಸಂಸದೆ ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ್ದ ತಹಸೀನ್ ಪೂನಾವಾಲಾರಿಗೆ ನೋಟಿಸ್, ವಿಚಾರಣೆಗೆ ಕರೆದ ಶಿವಮೊಗ್ಗ ಪೊಲೀಸ್
ಆದ್ರೆ ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಜಮೀರ್ ತಮ್ಮ ಕ್ಷೇತ್ರ ಬಿಟ್ಟುಕೊಡುವುದಾಗಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರದ ಅಳಿಯ ಅವರು ಇಲ್ಲಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸದ್ಯ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕ ಜಮೀರ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ದೆಹಲಿ ಆಹ್ವಾನಕ್ಕೆ ಮುಖ್ಯ ಕಾರಣವೇನೆಂಬುವುದು ತಿಳಿದು ಬಂದಿಲ್ಲ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ