ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು (Coronavirus) ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೋಮವಾರ (ಜ.17) ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಸಭೆ ನಿಗದಿಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳು ಜ.19ಕ್ಕೆ ಅಂತ್ಯವಾಗಲಿವೆ. ಕಠಿಣ ನಿಯಮಗಳನ್ನು ಮುಂದುವರಿಸುವ ಔಚಿತ್ಯ ಮತ್ತು ಫೆಬ್ರುವರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu padayatra) ಸಂದರ್ಭದಲ್ಲಿ ಕೋಲಾರ ಜಿಲ್ಲೆಯಿಂದ ಭದ್ರತೆಗಾಗಿ 160 ಪೊಲೀಸರು ರಾಮನಗರಕ್ಕೆ ತೆರಳಿದ್ದರು. ಈ ಪೈಕಿ ಈವರೆಗೆ 63 ಪೊಲೀಸರಿಗೆ (Police) ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ಕೆಲ ಪೊಲೀಸರ ಕೊವಿಡ್ (covid 19) ಟೆಸ್ಟ್ ರಿಪೋರ್ಟ್ ಬರಬೇಕಿದ್ದು, ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ನಿನ್ನೆಯವರೆಗೂ ಒಟ್ಟು 32 ಜನ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಇಂದು ಹೊಸದಾಗಿ 31 ಜನ ಪೊಲೀಸರಿಗೆ ಸೋಂಕು ಪತ್ತೆಯಾಗಿದೆ.
ಚಾಮರಾಜನಗರ: ಕೊಳ್ಳೇಗಾಲ ಟೌನ್ ಠಾಣೆಯ 9 ಪೊಲೀಸರಿಗೆ ಕೊರೊನಾ
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಯ 9 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರ ಪಿಎಸ್ಐ, ಕಾನ್ಸ್ಟೇಬಲ್ಗೆ ಸೋಂಕು ತಗುಲಿತ್ತು. ಹೀಗಾಗಿ 45 ಸಿಬ್ಬಂದಿಗಳಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗಿತ್ತು. ಸದ್ಯ 45 ಪೊಲೀಸರ ಪೈಕಿ 9 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ವಿಜಯಪುರ: ಜಿಲ್ಲೆಯಲ್ಲಿ 102 ಜನರಿಗೆ ಕೊರೊನಾ ದೃಢ
ವಿಜಯಪುರ ಜಿಲ್ಲೆಯಲ್ಲಿಂದು 102 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಪಾಸಿಟಿವ್ ಪೀಡಿತರ ಸಂಖ್ಯೆ 436ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 25 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್ನಲ್ಲಿ 411 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ 27 ರೋಗಿಗಳು ಬಿಡುಗಡೆಯಾಗಿದ್ದಾರೆ. ಇನ್ನೂ 1,537 ಜನರ ಗಂಟಲು ದ್ರವ ಇಂದು ಸಂಗ್ರಹಿಲಾಗಿದೆ. 1,360 ಜನರ ಗಂಟಲು ದ್ರವ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಎಎಂಸಿ ಕಾಲೇಜಿನ 42 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರ್ ಕಾಲೇಜಿನ 23 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿರುವ 30 ಜನರಿಗೆ ಈಗಾಗಲೇ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಆರೋಗ್ಯ ಅಧಿಕಾರಿಗಳಿಂದ ಕಾಲೇಜಿನಲ್ಲಿ ತಪಾಸಣೆ ನಡೆಸಿದ್ದು, ಇಂದು ಸಂಜೆಯ ವೇಳೆಗೆ ಇನ್ನಷ್ಟು ಪಾಸಿಟಿವ್ ಕೇಸ್ ಪತ್ತೆ ಆಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲೇಜಿನಲ್ಲಿರುವ ಹಾಸ್ಟೆಲ್ನಲ್ಲಿಯು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಎರಡು ಹಾಸ್ಟೆಲುಗಳನ್ನು ಕಂಟೋನ್ಮೆಂಟ್ ಮಾಡಲಾಗಿದೆ.
ಇದನ್ನೂ ಓದಿ:
Published On - 6:45 pm, Sun, 16 January 22