BMTC Guidelines: ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ ಕಡ್ಡಾಯ: ಹೊಸ ಮಾರ್ಗಸೂಚಿ ಪ್ರಕಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2022 | 3:17 PM

ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಜೊತೆಗೆ ಇರಿಸಿಕೊಂಡಿರಬೇಕು. ಬಸ್​​ನಲ್ಲಿ ಪ್ರಯಾಣಿಕರು ಮಾಸ್ಕ್​​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

BMTC Guidelines: ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ ಕಡ್ಡಾಯ: ಹೊಸ ಮಾರ್ಗಸೂಚಿ ಪ್ರಕಟ
ಬಿಎಂಟಿಸಿ ಬಸ್
Follow us on

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ನಿಯಮಾವಳಿಗಳಿಗೆ ಅನುಗುಣವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಕರ್ಫ್ಯೂ ವೇಳೆ ಬಸ್​ಗಳಲ್ಲಿ ಯಾರೆಲ್ಲಾ ಸಂಚರಿಸಬಹುದು? ಯಾರಿಗೆ ಅವಕಾಶವಿಲ್ಲ ಎಂಬುದನ್ನು ಮಾರ್ಗಸೂಚಿಯು ಸ್ಪಷ್ಟಪಡಿಸಿದೆ. ವಾರಾಂತ್ಯ ಕರ್ಫ್ಯೂ ಇರುವ ದಿನಗಳಲ್ಲಿಯೂ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಬಸ್​ಗಳ ಸಂಚಾರ ಇರುತ್ತದೆ. ಅಗತ್ಯ ಸೇವೆಗಳಡಿ ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.

ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ನಿಗಮದ ಬಸ್​ಗಳಲ್ಲಿ ಸಂಚರಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸರ್ಕಾರದ ಆದೇಶದ ಅನ್ವಯ ಅನುಮತಿ ಪಡೆದ ಇತರ ವಲಯಗಳ ಸಿಬ್ಬಂದಿಗೂ ಪ್ರಯಾಣಕ್ಕೆ ಅವಕಾಶವಿದೆ. ಪ್ರಯಾಣದ ವೇಳೆ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಮ್ಮೊಡನೆ ಇರಿಸಿಕೊಂಡಿರಬೇಕು. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಬಸ್​​ನಲ್ಲಿ ಪ್ರಯಾಣಿಕರು ಮಾಸ್ಕ್​​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗೆ ತರಳುವ ರೋಗಿ ಮತ್ತು ಸಹಾಯಕರ ಪ್ರಯಾಣಕ್ಕೆ ಅವಕಾಶವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸರ್ಕಾರಿ, ಖಾಸಗಿ ಬ್ಯಾಂಕ್​​, ವಿಮಾ ಇಲಾಖೆ ಸಿಬ್ಬಂದಿಗೂ ಅವಕಾಶವಿದೆ.

‘ವೀಕೆಂಡ್ ಕರ್ಫ್ಯೂ ವೇಳೆ ಜನಸಾಮಾನ್ಯರಿಗೆ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಅಗತ್ಯ ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ. ಶನಿವಾರ, ಭಾನುವಾರ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಸಿಗುವುದಿಲ್ಲ. ತುರ್ತು, ಅಗತ್ಯ ಸೇವೆಗಳಿಗೆ ಮಾತ್ರ ವಿಶೇಷ ಬಸ್​ಗಳ ಸೇವೆ ಇರಲಿದೆ’ ಎಂದು ಟಿವಿ9 ಕನ್ನಡ ಡಿಜಿಟಲ್​ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಮಾಹಿತಿ ನೀಡಿದರು.

ನಮ್ಮ ಮೆಟ್ರೋ: ವೀಕೆಂಡ್ ಕರ್ಫ್ಯೂ​ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ.

ಕೆಎಸ್​ಆರ್​ಟಿಸಿ ಬಸ್ ಸಂಚಾರ: ಮುಂದಿನ ಎರಡು ವಾರಗಳ ಕಾಲ ವೀಕೆಂಡ್​ ಕರ್ಫ್ಯೂ ಇರಲಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಮಾಜಿ ಸಚಿವ ಸುರೇಶ್ ಕುಮಾರ್ ಬಿಎಂಟಿಸಿ ಬಸ್​ನಲ್ಲಿ ಸಂಚಾರ; ಸರಳತೆಗೆ ಸಾರ್ವಜನಿಕರಿಂದ‌ ವ್ಯಾಪಕ ಮೆಚ್ಚುಗೆ‌
ಇದನ್ನೂ ಓದಿ: ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ

Published On - 3:15 pm, Wed, 5 January 22