ಬೆಂಗಳೂರು, ಅ.03: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಸಮೀಪ ತಡರಾತ್ರಿ ಚಲಿಸುತ್ತಿದ್ದ ಬೃಹತ್ ಕ್ರೇನ್ (Crain) ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ದಗ ದಗ ಉರಿಯುವ (Fire ಕ್ರೇನ್ ಕಂಡು ಜನ ಭಯಭೀತರಾಗಿದ್ದು ಕೂಡಲೆ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಹರಸಾಹಸ ಪಟ್ಟು ಬೆಂಕಿ ನಂದಿಸುವ ಕಾರ್ಯ ಮಾಡಿವೆ. ಇನ್ನು ವರ್ತೂರಿನಿಂದ ಬಿಡದಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು ಕ್ರೇನ್ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ಹಾಗೂ ಸಿಬ್ಬಂದಿ ಕೆಳಗೆ ಜಿಗಿದು ಪ್ರಾಣ ಕಾಪಾಡಿಕೊಂಡಿದ್ದಾರೆ. ಕ್ರೇನ್ ಚಾಲಕ, ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರ್ತೂರಿನಿಂದ ಬಿಡದಿಗೆ ಹೋಗುತ್ತಿದ್ದ ವೇಳೆ ಕ್ರೇನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಯಾದ ಚಾಲಕ ಬೆಂಕಿ ನಂದಿಸಲು ವಾಹನವನ್ನು ನಿಧಾನಗೊಳಿಸಿದ್ದ. ಆದರೆ ನೋಡು ನೋಡುತ್ತಿದ್ದಂತೆ ಬೆಂಕಿ ದಗ ದಗನೇ ಹೊತ್ತಿ ಉರಿದು ಜ್ವಾಲೆ ಇಡೀ ಕ್ರೇನ್ ಆವರಿಸಿದೆ. ಕೂಡಲೇ ಕ್ರೇನ್ ನಿಂದ ಹೊರ ಜಿಗಿದು ಚಾಲಕ ಹಾಗೂ ಇಬ್ಬರು ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ರಸ್ತೆಯ ಪಕ್ಕಕ್ಕೆ ಕ್ರೇನ್ ನಿಲ್ಲಿಸಿ ಚಾಲಕ ಆಚೆ ಜಂಪ್ ಮಾಡಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ರಸ್ತೆಯ ಎರಡು ಬದಿಯಲ್ಲಿ ಎರಡು ಪೆಟ್ರೋಲ್ ಬಂಕ್ಗಳಿದ್ದವು. ಸದ್ಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನಗಳು ಹೊತ್ತಿ ಉರಿಯುತ್ತಿದ್ದ ಕ್ರೇನ್ ಬೆಂಕಿ ನಂದಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು: ವಿಡಿಯೋ ವೈರಲ್
ಇನ್ನು ಬೆಂಗಳೂರಿನಲ್ಲಿ ನಿನ್ನೆ ಇದೇ ರೀತಿಯ ಘಟನೆ ನಡೆದಿತ್ತು. ದಕ್ಷಿಣ ಬೆಂಗಳೂರು ಜೆಪಿ ನಗರದ ದಾಲ್ಮಿಯಾ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಕಾರು ಸುಟ್ಟು ಭಸ್ಮವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಸ್ವತಃ ಕಾರು ಮಾಲೀಕರೇ ಕಾರು ಚಲಾಯಿಸುತ್ತಿದ್ದ ವೇಳೆ ಬಾನೆಟ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ ಎಂದು ಪುಟ್ಟೇನಹಳ್ಳಿ ಪೊಲೀಸ್ ರಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:55 am, Tue, 3 October 23