ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು (ಅ 4) ಆಯುಧಪೂಜೆಯ (Ayudha Puja) ಸಡಗರ. ನಾಳೆ ವಿಜಯದಶಮಿ (Vijayadashami) ಸಂಭ್ರಮ. ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಸಲು ಜನರು ಮಾರುಕಟ್ಟೆಗಳಿಗೆ ದಾಂಗುಡಿಯಿಟ್ಟಿದ್ದಾರೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಸೇರಿದಂತೆ ರಾಜ್ಯದ ಹಲವು ಪ್ರಮುಖ ಜಿಲ್ಲಾ ಕೇಂದ್ರಗಳ ಮಾರುಕಟ್ಟೆಗಳು ಜನರಿಂದ ತುಂಬಿತುಳುಕುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯೂ ಮುಗಿಲುಮುಟ್ಟಿದ್ದು ಮಾರುಕಟ್ಟೆಗೆ ಬಂದವರು ಬೆಲೆಏರಿಕೆಯ ಬಿಸಿಗೆ ಕಂಗಾಲಾಗಿದ್ದಾರೆ.
‘ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ಹೂವುಗಳ ದರ ಹೆಚ್ಚಾಗುತ್ತದೆ. ಧಾರ್ಮಿಕ ಆಚರಣೆಗಳು ಇರುವುದರಿಂದ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇತ್ತೀಚೆಗಷ್ಟೇ ವ್ಯಾಪಕವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ಸಕಾಲಕ್ಕೆ ಅಗತ್ಯ ವಸ್ತುಗಳು ಮಾರುಕಟ್ಟೆಗೆ ತಲುಪುವಲ್ಲಿ ಸಮಸ್ಯೆಯಾಯಿತು. ಬೆಂಗಳೂರಿನ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಕೆ.ಆರ್.ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಧಾರಣೆ ವಿವರ ಇಂತಿದೆ.
ಹೂವು (ಕೆಜಿಗಳಲ್ಲಿ)
ಮಲ್ಲಿಗೆ ₹ 950ರಿಂದ ₹ 1,000, ಕನಕಾಂಬರ ₹ 3,000, ಸೇವಂತಿ ₹ 400ರಿಂದ 500, ಗುಲಾಬಿ ₹ 410, ಸುಗಂಧರಾಜ ₹ 400, ಚೆಂಡು ಹೂವು ₹ 160-170, ಕಾಕಡ ₹ 700ರಿಂದ ₹ 800.
ಹಣ್ಣುಗಳು (ಕೆಜಿಗೆ)
ಸೇಬು ₹ 150, ದಾಳಿಂಬೆ ₹ 250, ಮೂಸಂಬಿ ₹ 100, ಆರೆಂಜ್ ₹ 200, ಸಪೋಟ ₹ 180, ಸೀಬೆಹಣ್ಣು ₹ 150, ಏಲಕ್ಕಿ ಬಾಳೆಹಣ್ಣು ₹ 100, ದ್ರಾಕ್ಷಿ ₹ 200ರಿಂದ ₹ 220. ಕೇವಲ ನಾಲ್ಕು ದಿನಗಳ ಹಿಂದೆ ಹಣ್ಣುಗಳ ಧಾರಣೆ ಕಡಿಮೆಯಾಗಿತ್ತು. ಸೇಬು ₹ 110, ದಾಳಿಂಬೆ ₹ 130, ಮೂಸಂಬಿ ₹ 80, ಆರೆಂಜ್ 180, ಸಪೋಟ ₹ 160, ಸೀಬೆಹಣ್ಣು ₹ 60, ಏಲಕ್ಕಿ ಬಾಳೆಹಣ್ಣು ₹ 50, ದ್ರಾಕ್ಷಿ ₹ 130 ಇತ್ತು. ಆದರೆ ಈಗ ಬೆಲೆ ಹೆಚ್ಚಾಗಿದೆ.
ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳು
ಮಾವಿನ ಎಲೆ (ಕಟ್ಟು) ₹ 20, ಬಾಳೆ ಕಂಬ ₹ 60ರಿಂದ 80, ಬೇವಿನ ಸೊಪ್ಪು (ಕಟ್ಟು) ₹ 20, ತುಳಸಿ (ಮಾರು) ₹ 50, ಬೆಲ್ಲ (ಅಚ್ಚು / ಉಂಡೆ) ₹ 70ರಿಂದ 80.
ಆಯುಧಪೂಜೆ ಸಡಗರ
ಬೂದಗುಂಬಳ ಕಾಯಿ, ಬಾಳೆ ಕಂಬ ಎಲ್ಲ ಮಾರುಕಟ್ಟೆಗಳಲ್ಲಿ ಎದ್ದು ಕಾಣುತ್ತಿದೆ. ಒಂದು ಮಾರು ಕನಕಾಂಬರ ಹೂ ₹ 500ರಿಂದ ₹ 600ರವರೆಗೆ ಮಾರಾಟವಾಗುತ್ತಿದೆ. ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಬರುವ ಮಲ್ಲಿಗೆ, ಮಾರಿಗೋಲ್ಡ್, ಸೇವಂತಿ, ಐಸ್‌ಬರ್ನ್ ಸೇವಂತಿಗೆ ದರವೂ ಏರಿಕೆ ಕಂಡಿದೆ. ಹಿಂದೂಪುರ, ಗೌರಿಬಿದನೂರು ಕಡೆಯಿಂದ ನಿರೀಕ್ಷಿತ ರೀತಿಯಲ್ಲಿ ಸೇವಂತಿ ಹೂ ಬರುತ್ತಿರುವುದು ಬೆಲೆಯಲ್ಲಿ ತುಸು ಸ್ಥಿರತೆ ಉಳಿಯಲು ನೆರವಾಗಿದೆ.
ಆಯುಧಪೂಜೆ ಹಿನ್ನೆಲೆಯಲ್ಲಿ ಬೂದುಗುಂಬಳದ ದರ ಈ ಬಾರಿ ಗಗನಕ್ಕೇರಿದೆ. ಹೋಲ್ಸೇಲ್ ಆಗಿ ಖರೀದಿಸಿದರೆ ಸುಮಾರು ₹ 30ರ ಆಸುಪಾಸು, ಚಿಲ್ಲರೆಯಾಗಿ ಖರೀದಿಸಿದರೆ ₹ 40ರ ಆಸುಪಾಸಿಗೆ ಸಿಗುತ್ತಿದೆ. ಬೂದುಗುಂಬಳವನ್ನು ಇಡಿಯಾಗಿ ಖರೀದಿಸಿದರೆ ಉತ್ತಮ ಮಾಲು ₹ 200ರಿಂದ ₹ 300ರ ಆಸುಪಾಸಿಗೆ ಸಿಗುತ್ತಿದೆ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ಫ್ಲೈಓವರ್ಗಳ ಕೆಳಗೆ ಹಾಗೂ ಜನಸಂಚಾರ ಇರುವ ಸ್ಥಳಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳು ತಲೆಎತ್ತಿವೆ.
Published On - 8:31 am, Tue, 4 October 22