
ಬೆಂಗಳೂರು, ನವೆಂಬರ್ 25: ಕಬ್ಬನ್ ಪಾರ್ಕ್‌ನಲ್ಲಿ (Cubbon Park) ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ನಗರದಲ್ಲಿರುವ ಪ್ರಮುಖ ರಸ್ತೆಗಳಂತೆಯೇ ವಾಹನ ಸವಾರರು ಕಬ್ಬನ್ ಪಾರ್ಕ್ನ ರಸ್ತೆಗಳನ್ನೂ ಬಳಕೆ ಮಾಡುತ್ತಾರೆ. ಆದರೆ ನವೆಂಬರ್ 27 ರಿಂದ ಕಬ್ಬನ್ ಪಾರ್ಕ್ನಲ್ಲಿ 11 ದಿನಗಳ ಕಾಲದ ಫ್ಲವರ್ ಶೋ ಆಯೋಜನೆ ಹಿನ್ನಲೆ ಒಂದು ಗೇಟ್ನ ಸಂಚಾರ ನಿಯಂತ್ರಣ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ನಗರದ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಕಬ್ಬನ್ ಪಾರ್ಕ್ ಮಾರ್ಗವಾಗಿ ದಿನನಿತ್ಯ ಅನೇಕ ವಾಹನ ಸವಾರರು ಸಂಚಾರ ಮಾಡುತ್ತಾರೆ. ಈ ಮಾರ್ಗದ ಮೂಲಕ ರಿಚ್‌ಮಂಡ್ ಸರ್ಕಲ್ , ಶಿವಾಜಿನಗರ, ಕೆ ಆರ್ ಸರ್ಕಲ್, ಕಾರ್ಪೊರೇಷನ್ ಕಡೆಗೆ ಸಂಚಾರ ಬೆಳೆಸುತ್ತಾರೆ. ನವೆಂಬರ್ 27 ರಿಂದ ಹನ್ನೊಂದು ದಿನಗಳ ಕಾಲ ಜನರು ತಾವು ಸಂಚರಿಸುವ ಮಾರ್ಗ ಬದಲಿಸಬೇಕಿದೆ. ಫ್ಲವರ್ ಶೋ ಹಿನ್ನಲೆ ಬರುವ 11 ದಿನಗಳ ಕಾಲ ಕೋರ್ಟ್ ವಿಠಲ್ ಮಲ್ಯ ರಸ್ತೆ ಸಂಪರ್ಕಿಸುವ ರಸ್ತೆ, ಬ್ಯಾಂಡ್ ಸ್ಟ್ಯಾಂಡ್ ಬಾಲಭವನದ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಿದ್ದು, ಇದರಿಂದ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಎದುರಾಗುವ ಸಾಧ್ಯತೆ ಇದೆ.
ಹತ್ತು ವರ್ಷಗಳ ಬಳಿಕ ಕಬ್ಬನ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ನ. 27 ರಿಂದ ಡಿ.7ರ ವರೆಗೆ ಪುಷ್ಪ ಪ್ರದರ್ಶನ ಜೋತೆಗೆ ಕಲಾ, ಸಂಸ್ಕೃತಿ ಹಬ್ಬ ಹಮ್ಮಿಕೊಳ್ಳಲಾಗುತ್ತದೆ. ಆಲಂಕಾರಿಕ, ದೇಸಿ-ವಿದೇಶಿ ಹಾಗೂ ಕುಂಡಗಳನ್ನೂ ಸಿದ್ಧ ಮಾಡಿಕೊಳ್ಳಲಾಗುತ್ತದೆ. ಪುಷ್ಪಗಳಲ್ಲಿ ಪ್ರಾಣಿಗಳ ಆಕೃತಿ ರಚಿಸಿ ಮಕ್ಕಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗುತ್ತದೆ. 20 ಸಾವಿರದಿಂದ 25 ಸಾವಿರ ಕುಂಡಗಳನ್ನು ಉದ್ಯಾನವನದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ ಇಡಲು ಪ್ಲಾನ್ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ಎಂದು ಕಬ್ಬನ್ ಪಾರ್ಕ್ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.