ಬೆಂಗಳೂರು: ದಕ್ಷಿಣ ಅಂಡಮಾನ್ನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ವಾಯುಭಾರ ಕುಸಿತ ಇಂದು ಮಧ್ಯಾಹ್ನದ ಬಳಿಕ ಚಂಡಮಾರುತದ ರೂಪ ಪಡೆಯಲಿದೆ. ಗಾಳಿಯ ವೇಗ 60 ರಿಂದ 70 km ಇರಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ, ಒರಿಸ್ಸಾದ ದಕ್ಷಿಣ ಪ್ರದೇಶಗಳಿಗೆ ಸೈಕ್ಲೋನ್ ಅಪ್ಪಳಿಸಲಿದೆ. ಮೇ 10 ನೇ ತಾರೀಕಿನ ವೇಳೆಗೆ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಇದೆ. ಕರ್ನಾಟಕಕ್ಕೆ ಸೈಕ್ಲೋನ್ ಎಫೆಕ್ಟ್ ಇಲ್ಲ. ಈಗ ಆಗ್ತಿರುವ ಮಳೆಯ ಪ್ರಮಾಣವೇ ಮುಂದುವರಿಯಲಿದೆ. ರಾಜ್ಯದಲ್ಲಿ ಮೂರು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ 3 ದಿನ ಕರ್ನಾಟಕದಲ್ಲಿ ವರುಣನ ಆರ್ಭಟ ಇರಲಿದೆ. ಬೆಂಗಳೂರು (Bengaluru Rain) ಮಾತ್ರವಲ್ಲದೆ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮೇ 10ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೆರಡು ದಿನ (ಮೇ 10ರವರೆಗೆ) ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಕೂಡ ಇದೆ.
ಬೆಂಗಳೂರು ಮಾತ್ರವಲ್ಲದೆ ಕರಾವಳಿ, ಮಲೆನಾಡಿನಲ್ಲಿ ಕೂಡ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆಯೂ ಜೋರಾಗಿ ಮಳೆ ಸುರಿದಿದ್ದು, ಇಂದು ಸಂಜೆಯ ನಂತರವೂ ಮಳೆ ಅಬ್ಬರಿಸುವ ನಿರೀಕ್ಷೆಯಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಿಗ್ಗೆ, ಮಧ್ಯಾಹ್ನ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆಯ ಬಳಿಕ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.