ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ; ಕಾಂಗ್ರೆಸ್ ಐಸಿಯುನಲ್ಲಿದೆ ಚುನಾವಣೆ ವೇಳೆಗೆ ಸತ್ತು ಹೋಗುತ್ತೆ ಎಂದ ಕಟೀಲು
ಕಾಂಗ್ರೆಸ್ ಅರಾಜಕತೆಯ ಸೃಷ್ಟಿಕರ್ತ. ಅಧಿಕಾರ ಇಲ್ಲದಿದ್ರೆ ಕೈ ನಾಯಕರು ವಿಲವಿಲ ಒದ್ದಾಡ್ತಾರೆ. ರಾಹುಲ್ ಗಾಂಧಿ ನೇಪಾಳಕ್ಕೆ ಹೋಗಿ ಏನ್ ಮಾಡಿದ್ರು? ಇದರ ಬಗ್ಗೆ ಯಾಕೆ ಸಿದ್ದರಾಮಯ್ಯ, ಡಿಕೆಶಿ ಮೌನವಾಗಿದ್ದಾರೆ? ನೇಪಾಳದಲ್ಲಿ ರಾಹುಲ್ ಗಾಂಧಿ ಯಾರ ಭೇಟಿ ಮಾಡಿದ್ರು ಹೇಳಿ. -ನಳಿನ್ ಕುಮಾರ್ ಕಟೀಲು
ಬೆಂಗಳೂರು: ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಮುಖಂಡರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಯುವ ಮೋರ್ಚಾ ಸಂಘಟನೆ ಕುರಿತು ಚರ್ಚೆ ನಡೆಸಲಿದ್ದಾರೆ. ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಕುರಿತು ಚಿಂತನ ಮಂಥನ ನಡೆಸಲಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಕಟೀಲು ಸಲಹೆ ನೀಡಲಿದ್ದಾರೆ.
ಕಾಂಗ್ರೆಸ್ ಅರಾಜಕತೆಯ ಸೃಷ್ಟಿಕರ್ತ. ಅಧಿಕಾರ ಇಲ್ಲದಿದ್ರೆ ಕೈ ನಾಯಕರು ವಿಲವಿಲ ಒದ್ದಾಡ್ತಾರೆ. ರಾಹುಲ್ ಗಾಂಧಿ ನೇಪಾಳಕ್ಕೆ ಹೋಗಿ ಏನ್ ಮಾಡಿದ್ರು? ಇದರ ಬಗ್ಗೆ ಯಾಕೆ ಸಿದ್ದರಾಮಯ್ಯ, ಡಿಕೆಶಿ ಮೌನವಾಗಿದ್ದಾರೆ? ನೇಪಾಳದಲ್ಲಿ ರಾಹುಲ್ ಗಾಂಧಿ ಯಾರ ಭೇಟಿ ಮಾಡಿದ್ರು ಹೇಳಿ. ದೇಶದ ವಿರೋಧಿ ಚೀನಾ ಜತೆ ಸ್ನೇಹ ಮಾಡ್ತೀರಾ? ಕಾಂಗ್ರೆಸ್ ದೇಶದಲ್ಲಿ ಬಾಂಬಿನ ಕಾರ್ಖಾನೆ ಸೃಷ್ಟಿಸಿತ್ತು. ಭಿಂದ್ರನ್ ವಾಲೆಯ ಸೃಷ್ಟಿ ಇಂದಿರಾಗಾಂಧಿ ಮಾಡಿದ್ದು. ಇಂದಿರಾಗಾಂಧಿ ಭಯೋತ್ಪಾದನೆಗೆ ಕಾರಣ. ಮೋದಿಯವ್ರ ಎಂಟು ವರ್ಷದ ಆಡಳಿತದಲ್ಲಿ ಒಂದೇ ಒಂದು ಕಡೆ ಬಾಂಬ್ ಸ್ಫೋಟ ಆಗ್ಲಿಲ್ಲ ಎಂದು ನಳಿನ್ ಕುಮಾರ್ ಕಟೀಲು ಭಾಷಣ ಮಾಡುವ ವೇಳೆ ಪ್ರಸ್ತಾಪಿಸಿದ್ದಾರೆ.
ಬೊಮ್ಮಾಯಿ ಪಿಎಸ್ಐ ಅಕ್ರಮ ಆದಾಗ ಕೂಡಲೇ ತನಿಖೆಗೆ ಕೊಟ್ರು. ನಮ್ಮ ಸರ್ಕಾರ ಪಾರದರ್ಶಕ ತನಿಖೆ ನಡೆಸ್ತಿದೆ. ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದ್ರು. ನಮ್ಮ ಸರ್ಕಾರ ಬಂದು ಡ್ರಗ್ಸ್ ಮುಕ್ತ ಮಾಡ್ತು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದ್ದು ನಮ್ಮ ಸರ್ಕಾರ. ಹುಬ್ಬಳ್ಳಿ ದಾಂಧಲೆ ಹಿಂದೆ ಸಿದ್ದರಾಮಯ್ಯ ಷಢ್ಯಂತ್ರ ಇದೆ. ಶಿವಮೊಗ್ಗದ ಗಲಭೆ, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂದು ನಳಿನ್ ಕುಮಾರ್ ಕಟೀಲು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದ್ದಾರೆ.
ಕಾಂಗ್ರೆಸ್ ಐಸಿಯುನಲ್ಲಿದೆ ಚುನಾವಣೆ ವೇಳೆಗೆ ಸತ್ತು ಹೋಗುತ್ತೆ. ಅಲ್ಲಿ ಸಿದ್ದರಾಮಯ್ಯನವರದ್ದು ಒಂದು ಟೀಂ, ಡಿಕೆಶಿಯದ್ದು ಒಂದು ಟೀಂ. ಕಾಂಗ್ರೆಸ್ನಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ, ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಏನು ಕಟ್ಟುತ್ತಾರೆ ಅವರು ಎಂದು ಕಟೀಲು ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಎಂದು ಕಾಂಗ್ರೆಸ್ಗೆ ಭಯ ಶುರು. ಕಾಂಗ್ರೆಸ್ ದೇಶಕ್ಕೆ ಮೂರು ಕೊಡುಗೆ ಕೊಟ್ಟಿದೆ. ಭ್ರಷ್ಟಾಚಾರ, ಭಯೋತ್ಪಾದನೆ, ಕುಟುಂಬ ರಾಜಕಾರಣ ಕಾಂಗ್ರೆಸ್ ಕೊಡುಗೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
ಚಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಅಂತ ತೋರಿಸಿದ ಪಕ್ಷ ಬಿಜೆಪಿ. ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಇವತ್ತು ಕೇಂದ್ರದ ಗೃಹ ಸಚಿವ. ಹಳ್ಳಿಯಿಂದ ಬಂದವನೊಬ್ಬ ಸಾಮಾನ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಆಗ್ತಾನೆ, ಮೂರು ಸಲ ಎಂಪಿ ಆಗ್ತಾನೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಾವು ಪರಿವಾರವಾದರಿಂದ ಬಂದವರಲ್ಲ, ಹಣಬಲದಿಂದ ಬಂದವರಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು. ಗಾಂಧಿಯವ್ರು ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯ ಆಗಬೇಕು ಅಂದ್ರು. ಗಾಂಧಿ ಸ್ವಾತಂತ್ರ್ಯದ ನಂತರದ ಭಾರತ ಜಾತ್ಯಾತೀತ ಆಗಬೇಕು ಅನ್ನಲಿಲ್ಲ. ರಾಮನ ಭಾರತ ಆಗಲು ಪ್ರತೀ ವ್ಯಕ್ತಿ ರಾಮ ಆಗಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕಾರ್ಯ ಆಗಬೇಕು ಎಂದು ಕಟೀಲ್ ಹೇಳಿದ್ರು.
ಇತರೆ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Sun, 8 May 22