ಬೆಂಗಳೂರು, ನ.22: ಡಿಸೆಂಬರ್ 23ರಂದು 545 ಪಿಎಸ್ಐ(PSI) ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕ ಪ್ರಕಟ ಮಾಡಿದೆ. ಅದರಂತೆ ಬೆಂಗಳೂರಿನಲ್ಲಿಯೇ ಪಿಎಸ್ಐ ಮರು ಪರೀಕ್ಷೆ ((PSI Re exam) ನಡೆಸಲು ಕೆಇಎ(KEA) ಮುಂದಾಗಿದೆ. ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಮರುಪರೀಕ್ಷೆ ಬರೆಯಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ತಿಳಿಸಿದ್ದಾರೆ. ಇದೇ ನವೆಂಬರ್ 10 ರಂದು 545 ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ಹುದ್ದೆಗಳ ಮರುಪರೀಕ್ಷೆಗೆ ದಿನಾಂಕ ಪ್ರಕಟಿಸಿದೆ.
ಪಿಎಸ್ಐ ಮರುಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆಯಿಂದ ನಡೆಸಲು ಹೈಕೋರ್ಟ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಪಿಎಸ್‌ಐ ಮರು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕ ಪ್ರಕಟಿಸಿದೆ. ಈ ಹಿಂದೆ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಈ ನೇಮಕಾತಿ ಸಂಬಂಧದ ಅಧಿಸೂಚನೆಯನ್ನು ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪ ರಹಿತ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ನ.10 ರಂದು ಹೈಕೋರ್ಟ್ ಮರುಪರೀಕ್ಷೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಮೂಲಕ ನ್ಯಾಯಾದೀಶ ಪಿ.ಎಸ್.ದಿನೇಶ್ ಕುಮಾರ್, ಟಿ.ಜಿ.ಶಿವಶಂಕರೇಗೌಡರಿದ್ದ ಪೀಠ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು.
ಇದನ್ನೂ ಓದಿ:545 ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ಕುರಿತು ಮಹತ್ವದ ಮಾಹಿತಿ ನೀಡಿದ ಡಿಜಿಪಿ ಪ್ರವೀಣ್ ಸೂದ್
ಇನ್ನು ಘಟನೆ ಕುರಿತು ಮರುಪರೀಕ್ಷೆ ನಡೆಸಿದರೇ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಈಗಾಗಲೇ ಆಯ್ಕೆಯಾದ 490 ಅಭ್ಯರ್ಥಿಗಳಲ್ಲಿ 137 ಮಂದಿ ಮಹಿಳೆಯರಿದ್ದಾರೆ. ಮರು ಪರೀಕ್ಷೆಯಿಂದ ಅವರು ಮತ್ತೆ ಅಧ್ಯಯನ ಮಾಡಲು ಆಗುವುದಿಲ್ಲ. ಕೆಲವರು ಸರ್ಕಾರಿ, ಖಾಸಗಿ ಕಂಪನಿ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖೆ ವ್ಯಾಪ್ತಿಗೆ ಪರಿಗಣಿಸಿ. ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪತ್ರ ಬರೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Wed, 22 November 23