ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah Maidan)ದಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮಾಡಿದ ಮನವಿ ಕುರಿತು ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ನಿಲುವು ಪ್ರಕಟಿಸಲು ಸರ್ಕಾರಕ್ಕೆ ಒಕ್ಕೂಟ ಇಂದೇ ಗಡುವು ನೀಡಿತ್ತು. ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದ ಕಂದಾಯ ಇಲಾಖೆ, ಅನುಮತಿ ಕೊಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದೆ. ಅಂತಿಮ ನಿರ್ಧಾರ ಕೈಗೊಳ್ಳದಿದ್ದರೇ ನಾವೇ ಧ್ವಜ ಹಾರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪಟ್ಟು ಹಿಡಿದಿದೆ. ಹಾಗಾದರೆ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಕನ್ನಡ ಧ್ವಜ ಹಾರೇ ಬಿಡುತ್ತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ನಾಳೆ ಕನ್ನಡ ರಾಜ್ಯೋತ್ಸವ ಇದ್ದು, ಇನ್ನೂ ಸೂಕ್ತ ನಿರ್ಧಾರವನ್ನು ಕಂದಾಯ ಇಲಾಖೆ ಕೈಗೊಂಡಿಲ್ಲ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ರಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ಕ್ರಮ ಕೈಗೊಂಡು ನಿರ್ದೇಶನ ನೀಡುವಂತೆ ಪತ್ರ ಬರೆದಿದ್ದರು. ಅನುಮತಿ ವಿಚಾರವಾಗಿ ಪತ್ರ ಬರೆದು 3 ದಿನ ಕಳೆದ್ರೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೈಲೆಂಟ್ ಆಗಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕರೆ ಸ್ವಾತಂತ್ರ್ಯ ದಿನಾಚರಣೆ ಮಾದರಿಯಲ್ಲೇ ಕನ್ನಡ ರಾಜ್ಯೋತ್ಸವ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ನಿರ್ಧಾರ ಕೈಗೊಳ್ಳುವಲ್ಲಿ ಕಂದಾಯ ಇಲಾಖೆ ಮಾತ್ರ ತೀವ್ರ ಇಕ್ಕಟ್ಟಿಗೆ ಸಿಲುಕಿದಂತ್ತಾಗಿದೆ.
ಕಾನೂನು ವಿರುದ್ಧವಾಗಿ ಕನ್ನಡ ಧ್ವಜ ಹಾರಿಸುತ್ತೇವೆ: ಒಕ್ಕೂಟದ ಸದಸ್ಯರು
ಈ ವಿಚಾರವಾಗಿ ಮಾತನಾಡಿದ ಒಕ್ಕೂಟದ ಸದಸ್ಯರು, ಸರ್ಕಾರಕ್ಕೆ ಕನ್ನಡದ ಬಗ್ಗೆ ಗೌರವ ಇಲ್ಲ. ಅಭಿಮಾನ, ಪ್ರೀತಿ ಇದ್ದಿದ್ರೆ ಅನುಮತಿ ಕೊಡುತ್ತಿದ್ದರು. ಇಂದು ಸಂಜೆಯವರೆಗೆ ಸರ್ಕಾರಕ್ಕೆ ಗಡುವನ್ನ ಕೊಟ್ಟಿದ್ದೇವೆ. ಅನುಮತಿ ಕೊಟ್ಟು ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಕೊಡಬೇಕು. ಒಂದು ವೇಳೆ ಅವಕಾಶ ಕೊಡದಿದ್ದರೆ, ನಾವೇ ಕಾನೂನು ವಿರುದ್ಧವಾಗಿ ಕನ್ನಡ ಧ್ವಜ ಹಾರಿಸುತ್ತೇವೆ. ನಮ್ಮ ಮನವಿಯನ್ನ ಸರ್ಕಾರಕ್ಕೆ ಜಿಲ್ಲಾಡಳಿತ ತಲುಪಿಸಿಲ್ಲ. ಅನುಮತಿ ನೀಡದಿರೋದಕ್ಕೆ ಸ್ಥಳೀಯ ಶಾಸಕರೇ ನೇರ ಹೊಣೆ. ನಮ್ಮ ಜೊತೆಗೂಡಿ ರಾಜ್ಯೋತ್ಸವ ಮಾಡುತ್ತೇವೆ ಅಂದ್ರು. ಈಗ ಜಮೀರ್ ಸೇರಿದಂತೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್, ಸಂಸದ ಪಿಸಿ ಮೋಹನ್ ಸೈಲೆಂಟ್ ಆಗಿದ್ದಾರೆ. ಯಾರು ಸುಮ್ಮನಿದ್ದರೂ ಪರವಾಗಿಲ್ಲ. ಸರ್ಕಾರದ ವಿರುದ್ಧವೇ ನಾವು ನಾಳೆ ಕನ್ನಡ ಬಾವುಟದ ಧ್ವಜಾರೋಹಣ ಮಾಡುತ್ತೇವೆ ಎಂದು ಒಕ್ಕೂಟ ಸದಸ್ಯರು ಹೇಳಿದರು. ಇನ್ನು ಅನುಮತಿ ನೀಡದಿದ್ದರೂ ಕಾನೂನಾತ್ಮಕವಾಗಿ ನಾಡ ಧ್ವಜ ಹಾರಿಸ್ತೀವೆ ಎಂಬ ಹೇಳಿಕೆ ವಿಚಾರವಾಗಿ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಖಜಾಂಚಿ ಯಶವಂತ್ಗೆ ಚಾಮರಾಜಪೇಟೆ ಪೊಲೀಸರು ಬುಲಾವ್ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:53 pm, Mon, 31 October 22