ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ
ಪೋಸ್ಟಿಂಗ್ಗಾಗಿ ಸರ್ಕಾರಕ್ಕೆ ಹಣ ಕೊಡಬೇಕು ಎಂದು ಹೇಳಿಲ್ಲ. ಯಾರೋ ಹೇಳಿದ್ದನ್ನು ನಾನು ಹೇಳಿಕೊಂಡು ಹೋದೆ ಅಷ್ಟೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದರು.
ಬೆಂಗಳೂರು: ಪೋಸ್ಟಿಂಗ್ಗಾಗಿ ಸರ್ಕಾರಕ್ಕೆ ಹಣ ಕೊಡಬೇಕು ಎಂದು ಹೇಳಿಲ್ಲ. 70 ಲಕ್ಷ ರೂ. ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರಂತೆ. ಯಾರೋ ಹೇಳಿದ್ದನ್ನು ನಾನು ಹೇಳಿಕೊಂಡು ಹೋದೆ ಅಷ್ಟೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ (MTB Nagaraj) ಸ್ಪಷ್ಟನೆ ನೀಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಐ ನಂದೀಶ್ ಹಣ ಕೊಟ್ಟು ಟ್ರಾನ್ಸ್ಫರ್ ಆಗಿದ್ದರೆಂಬ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು. ರಾಜೀನಾಮೆ ಕೊಡುವ ಕೆಲಸ ಮಾಡಿಲ್ಲ. ಹಣ ಕೊಟ್ಟಿದ್ದಕ್ಕೆ ಸಿದ್ದರಾಮಯ್ಯ, ಡಿಕೆಶಿ ದಾಖಲೆ ಕೊಡಲಿ. ಇನ್ಸ್ಪೆಕ್ಟರ್ 70-80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಹಣ ಪಡೆದು ಯಾವುದೇ ಪೋಸ್ಟಿಂಗ್ ನೀಡಿಲ್ಲ. ಪೋಸ್ಟಿಂಗ್ಗಾಗಿ ಯಾರೂ ಹಣ ಕೊಡಬೇಕಿಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದರು.
ಇನ್ಸ್ ಪೆಕ್ಟರ್ ನಂದೀಶ್ ನಮ್ಮ ಸಮುದಾಯದವರು. ನಾನು ಅವರನ್ನು ನೋಡಿಯೇ ಇಲ್ಲ. ಹಿಂದೆ ಅಲ್ಲಿ ಕೆಲಸ ಮಾಡುತ್ತಿದ್ದವರು, ನಂದೀಶ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ನನಗೆ ಕರೆ ಮಾಡಿದ್ದರು. ಅಲ್ಲಿಗೆ ಹೋಗುವಾಗ ಏನು ಅಂತಹ ಟೆನ್ಷನ್ ಅಂತಾ ಕೇಳಿದ್ದೆ. ಆಗ 70 ಲಕ್ಷ ಖರ್ಚು ಮಾಡಿಕೊಂಡಿದ್ದೀನಿ ಅಂತಾ ಹೇಳಿಕೊಂಡಿದ್ದರು ಅಂತಾ ಹೇಳಿದರು. 70-80 ಲಕ್ಷ ಕೊಟ್ಟು ಇಲ್ಲಿ ಏನು ಬಾಯಿ ಬಡಿದುಕೊಳ್ಳಲು ಬಂದಿದಾನಪ್ಪಾ ಅಂತಾ ಹೇಳಿದ್ದೆ. ಯಾರಿಗೆ ಕೊಟ್ಟಿದ್ದಾರೆ ಅಂತಾ ಈಗ ಸತ್ತೋಗಿರುವವರನ್ನೇ ಕೇಳಬೇಕು ಎಂದರು.
ಶೀಘ್ರವೇ ಇ-ಪೇಮೆಂಟ್ ತೆರಿಗೆ ಸಂಗ್ರಹ ಯೋಜನೆಗೆ ಚಾಲನೆ: ಎಂಟಿಬಿ ನಾಗರಾಜ್
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೀಘ್ರವೇ ಇ-ಪೇಮೆಂಟ್ ತೆರಿಗೆ ಸಂಗ್ರಹ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ಭಾಗದಿಂದಲೂ ತೆರಿಗೆ ಪಾವತಿಗೆ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ಸಂಪರ್ಕಕ್ಕೆ ಇರುವ ನಿಯಮ ಸರಳೀಕರಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಸಂಪುಟ ಅನುಮೋದನೆ ಪಡೆದು ನಿಯಮ ಜಾರಿ ಮಾಡಲಾಗುವುದು ಎಂದರು.
ಅಮೃತ್-2 ಯೋಜನೆ ಜಾರಿಗೆ 9 ಸಾವಿರ ಕೋಟಿ ಕ್ರಿಯಾ ಯೋಜನೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಎಲೆಕ್ಟ್ರಿಕ್ ಪಾಲಿಸಿ ಜಾರಿ. ಪೌರಾಡಳಿತ ಇಲಾಖೆಯಲ್ಲಿ 27 ಕಂದಾಯ ಅಧಿಕಾರಿಗಳಿಗೆ ಗ್ರೇಡ್-1 ಮುಖ್ಯಾಧಿಕಾರಿ ಹುದ್ದೆಗೆ ಪದೋನ್ನತಿಗೆ ಕ್ರಮ. ಗ್ರೇಡ್-2 ಮುಖ್ಯಾಧಿಕಾರಿಗಳಿಗೆ ಗ್ರೇಡ್-1 ಹುದ್ದೆಗೆ ಪದೋನ್ನತಿ ಮಾಡಲಾಗುವುದು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಟ್ರಕ್ ಲೋಡರ್ಸ್, ಚಾಲಕರು, ವಾಟರ್ ಮೆನ್, ವಾಲ್ವ್ ಮೆನ್, ಎಲೆಕ್ಟ್ರಿಷಿಯನ್, ಇತರೇ ಸಿಬ್ಬಂದಿ ಹಂತ ಹಂತವಾಗಿ ನೇರ ವೇತನ ಪಾವತಿಗೆ ಕ್ರಮ. ಶೀಘ್ರದಲ್ಲೇ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಜಾರಿ ಮಾಡಲಾಗವುದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Mon, 31 October 22