ಖಿನ್ನತೆಗೆ ಒಳಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2022 | 6:45 PM

ಫೋರೆನ್ಸಿಕ್ ಸೈಕಾಲಜಿ ವಿಭಾಗದ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೆಪ್ಟೆಂಬರ್​​​ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಖಿನ್ನತೆಗೆ ಒಳಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಅಧಿಕಾರಿ ಶ್ರುತಿ
Follow us on

ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದ (forensic laboratory) ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ಮಡಿವಾಳ ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದೆ. ಫೋರೆನ್ಸಿಕ್ ಸೈಕಾಲಜಿ ವಿಭಾಗದ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೆಪ್ಟೆಂಬರ್​​​ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನನ್ನ ಸಾವಿಗೆ ನಾನೇ ಕಾರಣ, ಕ್ಷಮಿಸಿ ಎಂದು ಡೆತ್​ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪತಿಯಿಂದ ವಿಚ್ಛೇದನ ಪಡೆದಿದ್ದರು. ಖಿನ್ನತೆಯಿಂದ ಶ್ರುತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಗರದ ಜ್ಞಾನಭಾರತಿ ಯೂನಿವರ್ಸಿಟಿ ಬಳಿ ಲ್ಯಾಂಬೋರ್ಗಿನಿ ಕಾರು ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಕರೆಂಟ್ ಪೋಲ್​ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು.

2 ಬೈಕ್‌ಗಳಿಗೆ KSRTC ಬಸ್​ ಡಿಕ್ಕಿ; ಮೂವರು ಸಾವು

ಚಿತ್ರದುರ್ಗ: 2 ಬೈಕ್‌ಗಳಿಗೆ KSRTC ಬಸ್​ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಕುಕ್ಕವಾಡೇಶ್ವರ ದೇಗುಲ ಬಳಿ ನಡೆದಿದೆ. ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಗ್ರಾಮದ ಮನು(28), ಸತೀಶ(30), ರಂಗಾಪುರ ಗ್ರಾಮದ ಚಂದ್ರು(32) ಮೃತರು. ಈವರೆಗೆ ಮೃತರ ಗುರುತು ಪತ್ತೆಯಾಗಿಲ್ಲ. ಬೈಕ್​ಗಳ ಮೇಲೆ ಹರಿದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್​ ಭೇಟಿ, ಪರಿಶೀಲನೆ ಮಾಡಿದ್ದರು ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬುಲೆಟ್ ಬೈಕ್ ಡಿಕ್ಕಿ, ತೀವ್ರ ಗಾಯ

ಬೆಂಗಳೂರು: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿದ್ದು ತೀವ್ರ ಗಾಯಗಳಾಗಿರುವಂತಹ ಘಟನೆ ಸೆ 29ರಂದು ಮಧ್ಯಾಹ್ನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ ನಿವೃತ್ತ ಉದ್ಯೋಗಿಯಾಗಿರುವ ಹನುಮಂತನ್ (76) ಕಾಲು, ಮುಖಕ್ಕೆ ತೀವ್ರ ಗಾಯಗಳಾಗಿವೆ. ಬೈಕ್ ಚಾಲಕನ ಅತಿವೇಗದ ಚಾಲನೆಯಿಂದ ಅಚಾತುರ್ಯ ಉಂಟಾಗಿದೆ. ಸಲಾರ್ ಪುರಿಯಾ ಅಪಾರ್ಟ್‌ಮೆಂಟ್ ಮುಂದೆ ರಸ್ತೆ ದಾಟುತ್ತಿದ್ದಾಗ ಘಟನೆ ನಡೆದಿದೆ. ವೇಗವಾಗಿ ಬಂದ ಬೈಕ್ ಸವಾರನಿಂದ ಅಪಘಾತ ನಡೆದಿದ್ದು, ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಚ್ಎಸ್ಆರ್ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೋಮು ಸೌಹಾರ್ದತೆ ಗೆ ದಕ್ಕೆ ಹಿನ್ನಲೆ: ಇಬ್ಬರ ಬಂಧನ

ಕಾರವಾರ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಡಿ ಶಿರಸಿಯಲ್ಲಿ ಇಬ್ಬರನ್ನು ಅರೆಸ್ಟ್​ ಮಾಡಲಾಗಿದೆ. ಮರಾಠಿ ಕೊಪ್ಪದ ಮೊಹ್ಮದ್ ಗೌಸ್(35), ಮೆಹಬೂಬ್ ಸಾಬ್(27) ಬಂಧಿತರು. ಶಿರಸಿ ನಗರ ಠಾಣೆ ಪೊಲೀಸರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.