ದೇವರ ದಯೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ: ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದ ಡಾ.ಪರಮೇಶ್ವರ್
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕ್ರೀಡಾಕೂಟದ ವೇಳೆ ಹೃದಯಬಡಿತ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಅವರ ಆರೋಗ್ಯ ಈಗ ಸಂಪೂರ್ಣ ಸ್ಥಿರವಾಗಿದೆ. ಸಿದ್ದರಾಮಯ್ಯನವರ ಭೇಟಿಯ ನಂತರ, ಪರಮೇಶ್ವರ್ ಹೃದಯಕ್ಕೆ ಯಾವುದೇ ತೊಂದರೆಯಿಲ್ಲ ಹಾಗೂ ಬಿಪಿ ನಾರ್ಮಲ್ ಆಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ತೊಂದರೆಯಾಗಬಾರದೆಂದು ಅವರನ್ನು ಭೇಟಿ ಮಾಡದಂತೆ ಪರಮೇಶ್ವರ್ ಮನವಿ ಮಾಡಿದ್ದಾರೆ.

ಬೆಂಗಳೂರು, ಅ.27: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಹಠಾತ್ ಹೃದಯಬಡಿತ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯ ಪರಿಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ದೇವರ ದಯೆಯಿಂದ ನನ್ನ ಆರೋಗ್ಯವೀಗ ಸ್ಥಿರವಾಗಿದೆ, ಸಾರ್ವಜನಿಕರು ಹಾಗೂ ಬೆಂಬಲಿಗರು ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಪರಮೇಶ್ವರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಅವರ ಬಿಪಿ ನಾರ್ಮಲ್ ಆಗಿದೆ ಹಾಗೂ ಅವರ ಹೃದಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗೆ ಯಾರು ಬರಬೇಡಿ ಎಂದು ಡಿಸಿಎಂ ಪರಮೇಶ್ವರ್ ಮನವಿ:
“ಕ್ರೀಡಾಕೂಟದ ವೇಳೆ ಹೃದಯಬಡಿತ ತುಸು ಹೆಚ್ಚಾದ ಕಾರಣ ತಕ್ಷಣವೇ ವೈದೇಹಿ ಆಸ್ಪತ್ರೆಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆದಿದ್ದೇನೆ. ನನ್ನ ಮೇಲಿನ ಕಾಳಜಿಯಿಂದ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ಹಲವು ಹಿತೈಷಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಯಾರೂ ಆಸ್ಪತ್ರೆಗೆ ಬರಬೇಡಿ” ಎಂದು ಪರಮೇಶ್ವರ್ ವಿನಂತಿಸಿದ್ದಾರೆ.
ಎಕ್ ಪೋಸ್ಟ್ ಇಲ್ಲಿದೆ ನೋಡಿ:
ಇಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಹೃದಯಬಡಿತ ತುಸು ಹೆಚ್ಚಾದ ಕಾರಣ ತಕ್ಷಣವೇ ಆಸ್ಪತ್ರೆಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆದಿದ್ದೇನೆ.
ನನ್ನ ಮೇಲಿನ ಕಾಳಜಿಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಬಹಳಷ್ಟು ಮಂದಿ ಹಿತೈಷಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಹಲವರು ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ತಮ್ಮೆಲ್ಲರ ಪ್ರೀತಿ – ಕಾಳಜಿಗೆ ಧನ್ಯವಾದಗಳು.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇವರ ದಯೆಯಿಂದ ನನ್ನ ಆರೋಗ್ಯವೀಗ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಆಸ್ಪತ್ರೆ ಬಳಿ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ.
— Dr. G Parameshwara (@DrParameshwara) October 27, 2026
“ಪರಮೇಶ್ವರ್ ಆಲ್ ರೈಟ್, ಅತ್ಯಂತ ಆರಾಮಾಗಿದ್ದಾರೆ. ಅವರ ಹೃದಯಕ್ಕೆ ಯಾವುದೇ ತೊಂದರೆಯಿಲ್ಲ. ಅವರ ರಕ್ತದೊತ್ತಡ (BP) 120/80 ನಾರ್ಮಲ್ ಆಗಿದೆ. ಅವರು ಇವತ್ತು ಸಂಜೆಯೇ ಡಿಸ್ಚಾರ್ಜ್ ಆಗಲು ಸಿದ್ಧರಿದ್ದರು, ಆದರೆ ಮುನ್ನೆಚ್ಚರಿಕೆಯಾಗಿ ಇವತ್ತು ಒಂದು ದಿನ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಿ ಎಂದು ನಾನೇ ವೈದ್ಯರಿಗೆ ಸಲಹೆ ನೀಡಿದ್ದೇನೆ” ಎಂದು ತಿಳಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




