PFI Ban: ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಆದೇಶ, ನಿಷೇಧಿತ ಸಂಘಟನೆ ಪರ ಪ್ರತಿಭಟನೆಯೂ ಅಪರಾಧ; ಡಿಜಿ ಪ್ರವೀಣ್ ಸೂದ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2022 | 11:52 AM

ಜಿಲ್ಲಾಧಿಕಾರಿಗಳ ಮಟ್ಟದಲ್ಲಿಮುಂದಿನ ದಿನಗಳಲ್ಲಿ ನಿಷೇಧದ ಬಗ್ಗೆ ಅಧಿಕೃತ ಸೂಚನೆಗಳು ಇನ್ನೊಮ್ಮೆ ಹೊರಬೀಳುತ್ತವೆ.

PFI Ban: ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಆದೇಶ, ನಿಷೇಧಿತ ಸಂಘಟನೆ ಪರ ಪ್ರತಿಭಟನೆಯೂ ಅಪರಾಧ; ಡಿಜಿ ಪ್ರವೀಣ್ ಸೂದ್
ಡಿಜಿಪಿ ಪ್ರವೀಣ್ ಸೂದ್ (ಎಡಚಿತ್ರ) ಮತ್ತು ಪಿಎಫ್​ಐ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ದೇಶದ ಮಟ್ಟದಲ್ಲಿ ಪಿಎಫ್​ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಆದೇಶ (PFI Ban) ಹೊರಡಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ, ನಿಷೇಧದ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್ ಹೇಳಿದರು. ಪಿಎಫ್​ಐ ನಿಷೇಧ ಕುರಿತು ಮಾಹಿತಿ ನೀಡಿರುವ ಅವರು, ಎನ್​ಐಎ ಅಧಿಕಾರಿಗಳು ಸೆ 22ರಂದು ನಮ್ಮ ರಾಜ್ಯದಲ್ಲಿ ದಾಳಿ ನಡೆಸಿದ್ದರು. ಎನ್​ಐಎ ಸಿಬ್ಬಂದಿ 7 ಮಂದಿಯನ್ನು ಹಾಗೂ ನಾವು 15 ಮಂದಿಯನ್ನು ಬಂಧಿಸಿದ್ದೇವೆ. ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ ಎಂದು ತಿಳಿಸಿದರು.

ಭಾರತ ಸರ್ಕಾರವು ನಿನ್ನೆ ರಾತ್ರಿ (ಸೆ 27) ಪಿಎಫ್​ಐ ಸಂಘಟನೆಯನ್ನು UAPA ಕಾಯ್ದೆಯ ಅನ್ವಯ ನಿಷೇಧಿಸಿದೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿಮುಂದಿನ ದಿನಗಳಲ್ಲಿ ನಿಷೇಧದ ಬಗ್ಗೆ ಅಧಿಕೃತ ಸೂಚನೆಗಳು ಇನ್ನೊಮ್ಮೆ ಹೊರಬೀಳುತ್ತವೆ. ನಮಗೆ ಈ ಮೊದಲು ಪಿಎಫ್​ಐ ನಿಷೇಧದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಷೇಧಿತ ಸಂಘಟನೆಗಳ ಪರವಾಗಿ ಯಾರೇ ಪ್ರತಿಭಟನೆ ನಡೆಸಿದರೂ ತಪ್ಪಾಗುತ್ತದೆ. ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಂಧಿತ ಪಿಎಫ್​ಐ ಕಾರ್ಯಕರ್ತರನ್ನು ನಾವು ತಹಶೀಲ್ದಾರ್​ ಎದುರು ಹಾಜರುಪಡಿಸಿದ್ದೇವೆ. ಮುಂಜಾಗ್ರತಾ ಕ್ರಮವಾಗಿ 101 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ರಾಜ್ಯದಲ್ಲಿ ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಪಿಎಫ್​ಐ ಕಚೇರಿ ಬಳಿ ಭದ್ರತೆ

ಬೆಂಗಳೂರಿನ ಬೆನ್ಸನ್​ಟೌನ್​ನಲ್ಲಿರುವ ಪಿಎಫ್​ಐ ಪ್ರಧಾನ ಕಚೇರಿ ಬಳ ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಯಾರಿಗೂ ಗುಂಪುಗೂಡಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಭೇಟಿ ನೀಡಿ ಮಾಹಿತಿ ಪಡೆದರು.

ಯಾವೆಲ್ಲಾ ಸಂಘಟನೆಗಳು ನಿಷೇಧ

ದೇಶವ್ಯಾಪಿ ಎನ್​ಐಎ ದಾಳಿಯ ಬೆನ್ನಲ್ಲೇ ಪಿಎಫ್​ಐ ಮತ್ತು ಅದರ ಅಂಗ ಸಂಘಟನೆಗಳಾದ ರಿಹಾಬ್ ಇಂಡಿಯಾ ಫೌಂಡೇಷನ್, ಕ್ಯಾಂಪಸ್​ ಫ್ರಂಟ್​ ಆಫ್​ ಇಂಡಿಯಾ, ರೈಟ್​ ಆರ್ಗನೈಷೇನ್, ನ್ಯಾಷನಲ್​​ ಕಾನ್​ಫಡರೇಷನ್ ಆಫ್​​ ಹ್ಯೂಮನ್, ಆಲ್​ ಇಂಡಿಯಾ ಇಮಾಮ್ಸ್​ ಕೌನ್ಸಿಲ್, ನ್ಯಾಷನಲ್ ವುಮೆನ್ಸ್​​ ಫ್ರಂಟ್, ಜೂನಿಯರ್​ ಫ್ರಂಟ್​​, ಎಂಪವರ್​​​ ಇಂಡಿಯಾ ಫೌಂಡೇಷನ್ ಸಂಘಟನೆಗಳನ್ನು ಕೇಂದ್ರ ನಿಷೇಧಿಸಿದೆ.

ಸಂಘಟನೆಯ ಹೆಸರು ಬಳಸುವಂತಿಲ್ಲ

ಕಾನೂನುಬಾಹಿರ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದರಿಂದ ಈ ಸಂಘಟನೆಗಳ ಎಲ್ಲ ಕಾರ್ಯಚಟುವಟಿಕೆಗಳೂ ಕಾನೂನುಬಾಹಿರ ಎನಿಸಿಕೊಳ್ಳುತ್ತವೆ. ಪಿಎಫ್​ಐ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸಿದರೂ UAPA ಕಾಯ್ದೆಯ ಅಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ. ಯಾರೂ ಪಿಎಫ್​ಐ ಹೆಸರು ಬಳಸುವಂತಿಲ್ಲ, ಹೊಸದಾಗಿ ಸೇರುವಂತಿಲ್ಲ. ಈವರೆಗೆ ಬಂಧನಕ್ಕೆ ಒಳಗಾಗದ ಪಿಎಫ್​ಐ ಮುಖಂಡರು ಸಹ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಮಾಡುವಂತಿಲ್ಲ. ಪಿಎಫ್ಐ ಹೆಸರು ಬಳಕೆ ಮಾಡಿದರೆ, ಪಿಎಫ್ಐ ಹೆಸರಿನಲ್ಲಿ ಸಭೆ ನಡೆಸಿದರೆ ಕಾನೂನುಬಾಹಿರ ಚಟುವಟಿಕೆಯಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ತಿಳಿಸುತ್ತಾರೆ.

Published On - 11:52 am, Wed, 28 September 22