PFI Ban: ಉಗ್ರಗಾಮಿ ಸಂಘಟನೆಗಳಿಗೆ ಪಿಎಫ್ಐ ರಿಮೋಟ್ ಕಂಟ್ರೋಲ್ ಆಗಿತ್ತು: ಸಿಎಂ ಬೊಮ್ಮಾಯಿ
ಪಿಎಫ್ಐ ಕಾರ್ಯಕರ್ತರು ಹಲವು ಉಗ್ರಗಾಮಿ ಸಂಘಟನೆಗಳಲ್ಲಿ ತರಬೇತಿ ಪಡೆದು, ದುಷ್ಕೃತ್ಯ ನಡೆಸಲು ಮುಂದಾಗಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ. ಪಿಎಫ್ಐ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ‘ಪಿಎಫ್ಐ ನಿಷೇಧಿಸುವಂತೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದೆವು. ಪಿಎಫ್ ಸಂಘಟನೆಯನ್ನು ಯಾವಾಗ ನಿಷೇಧಿಸುವಿರಿ ಎಂದು ಹಲವರು ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಗಳಿಗೆ ಇದೀಗ ನಮ್ಮ ಸರ್ಕಾರ ಉತ್ತರ ನೀಡಿದೆ. ಪಿಎಫ್ಐ ಕಾರ್ಯಕರ್ತರು ಹಲವು ಉಗ್ರಗಾಮಿ ಸಂಘಟನೆಗಳಲ್ಲಿ ತರಬೇತಿ ಪಡೆದು, ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ಹಲವು ದೇಶದ್ರೋಹ ಚಟುವಟಿಕೆಗಳಲ್ಲಿಯೂ ಪಿಎಫ್ಐ ಭಾಗಿಯಾಗಿತ್ತು. ಹಲವು ಉಗ್ರಗಾಗಿ ಸಂಘಟನೆಗಳಿಗೆ ಪಿಎಫ್ಐ ರಿಮೋಟ್ ಕಂಟ್ರೋಲ್ ಆಗಿತ್ತು ಎಂದು ನಗರದಲ್ಲಿ ಬೊಮ್ಮಾಯಿ ಹೇಳಿದರು.
ಕೇಂದ್ರದ ಸೂಕ್ತ ಕ್ರಮ: ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ಪಿಎಫ್ಐ ನಿಷೇಧವನ್ನು ಸ್ವಾಗತಿಸಿದ್ದಾರೆ. ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದೆ. ಈ ಸಂಘಟನೆಗಳ ಬಗ್ಗೆ ಕೇಂದ್ರ ಸರ್ಕಾರವು ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ದೇಶದ ಏಕತೆ, ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎಂದು ಹೇಳಿದ್ದಾರೆ.
ಎನ್ಐಎ ಮತ್ತು ಕರ್ನಾಟಕ ಪೊಲೀಸರು ಈ ಮೊದಲೇ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದರು. ಮತಾಂಧ ಶಕ್ತಿಗಳು ದೇಶದ ವಿರುದ್ಧ ಯುವಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದವು. ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಫ್ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ ಯುಎಪಿಎ ಕಾಯಿದೆ ಅಡಿಯಲ್ಲಿ ನಿಷೇಧಿಸಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಪಿಎಫ್ಐ ಬ್ಯಾನ್ ಮಾಡಿ ಒಳ್ಳೇ ಕೆಲಸ ಮಾಡಿದೆ: ಎಸ್ಟಿ ಸೋಮಶೇಖರ್
ಕೇಂದ್ರ ಸರ್ಕಾರವು ಪಿಎಫ್ಐ ಬ್ಯಾನ್ ಮಾಡಿ ಸರ್ಕಾರವು ಒಳ್ಳೆಯ ಕೆಲಸ ಮಾಡಿದೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನಮ್ಮ ಆಲೋಚನೆ ಸಹ ಬ್ಯಾನ್ ಮಾಡುವುದೇ ಆಗಿತ್ತು. ರಾಜ್ಯದಲ್ಲಿ ಬ್ಯಾನ್ ಮಾಡಬೇಕೆಂದು ತೀರ್ಮಾನಿಸಿದ್ದೆವು. ಈಗ ಕೇಂದ್ರವೇ ಬ್ಯಾನ್ ಮಾಡಿ ಒಳ್ಳೇ ಕೆಲಸ ಮಾಡಿದೆ. ದಸರಾ ಟಾರ್ಗೆಟ್ ಮಾಡಿದ್ದರು ಎಂದು ಗೊತ್ತಾಗಿತ್ತು. ಆದರೆ ಕರ್ನಾಟಕ ಪೊಲೀಸರು ತುಂಬಾ ಸ್ಟ್ರಾಂಗ್ ಇದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಅನಾಹುತಕ್ಕೆ ಬ್ರೇಕ್: ಅರುಣ್ ಸಿಂಗ್
ಕೇಂದ್ರ ಸರ್ಕಾರವು ಪಿಎಫ್ಐ ಬ್ಯಾನ್ ಮಾಡುವುದು ಒಳ್ಳೆಯ ನಿರ್ಧಾರ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಅರುಣ್ ಸಿಂಗ್ ಹೇಳಿದರು. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗಲೂ ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿದ್ದವು. ಆದರೆ ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂಲಕ ಮುಂದೆ ನಡೆಯಬಹುದಿದ್ದ ದೊಡ್ಡ ಅನಾಹುತಕ್ಕೆ ಬ್ರೇಕ್ ಬಿದ್ದಿದೆ ಎಂದು ತಿಳಿಸಿದರು.
ಸರ್ಕಾರವೇನೋ ನಿಷೇಧಿಸಿದೆ: ಸಮಾಜ ಕ್ರಮ ವಹಿಸಬೇಕು
ಪಿಎಫ್ಐನಂಥ ದೇಶ ವಿಭಜಕ ಶಕ್ತಿಗಳನ್ನು ಸರ್ಕಾರವೇನೋ ನಿಷೇಧಿಸಿದೆ. ಇನ್ನು ಸಮಾಜ ಇಂಥ ವಿದ್ರೋಹಿ ಹಾಗೂ ವಿಚ್ಛಿದ್ರಕಾರಿ ಮನಃಸ್ಥಿತಿಯ ಸಂಘಟನೆಗಳ ಬಗ್ಗೆ ಎಚ್ಚರದಿಂದ ಇರಬೇಕು. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟಿಕರಣ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ರಾಜಕಾರಣ ಮಾಡಬಾರದು. ನಿಷೇಧದ ನಂತರ ಪಿಎಫ್ಐ ಸಂಘಟನೆಗೆ ಸೇರಿದ ದುಷ್ಟ ಶಕ್ತಿಗಳು ಭೂಗತರಾಗಿ ಕಾರ್ಯನಿರ್ವಹಿಸುವ, ಸಮಾಜವನ್ನು ಪ್ರಚೋದಿಸುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇಂತಹ ಯಾವುದೇ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಕಾನೂನಿನ ಜೊತೆ ಕೈ ಜೋಡಿಸಲು ಮನವಿ ಮಾಡುತ್ತೇನೆ ಎಂದು ಕೋರಿದ್ದಾರೆ.
Published On - 9:26 am, Wed, 28 September 22