ಬಿಟ್ ಕಾಯಿನ್ ಹಗರಣದಲ್ಲಿ DGP ದರ್ಜೆಯ ಅಧಿಕಾರಿಯ ಮಗನ ವಿಚಾರಣೆ

| Updated By: ಆಯೇಷಾ ಬಾನು

Updated on: May 14, 2024 | 8:09 AM

ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಯ ಮಗನ ವಿಚಾರಣೆ ಕೂಡ ನಡೆಯುತ್ತಿದೆ. ಎಸ್​ಐಟಿ ಅಧಿಕಾರಿಗಳು DGP ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬುವವರ ವಿಚಾರಣೆ ನಡೆಸಿದ್ದಾರೆ. ಆರೋಪಿ ಶ್ರೀಕಿಯಿಂದ ಅಕ್ರಮವಾಗಿ ಸಂಪಾದನೆ ಮಾಡಿದ್ದ ಬೆಟ್ ಕಾಯಿನ್ ನಿಂದ ಖರೀದಿ ಮಾಡಿ ಮಾರಾಟ ಮಾಡಿದ್ದ ಹಣ ಪಡೆದ ಆರೋಪದ ಮೇಲೆ ರಿಷಬ್ ವಿಚಾರಣೆ ನಡೆಯುತ್ತಿದೆ.

ಬಿಟ್ ಕಾಯಿನ್ ಹಗರಣದಲ್ಲಿ DGP ದರ್ಜೆಯ ಅಧಿಕಾರಿಯ ಮಗನ ವಿಚಾರಣೆ
ಬಿಟ್​ಕಾಯಿನ್
Follow us on

ಬೆಂಗಳೂರು, ಮೇ.14: ಬಿಟ್ ಕಾಯಿನ್ (Bitcoin) ಹಗರಣ ಸಂಬಂಧ ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಈಗಾಗಲೇ ಮತ್ತೊಮ್ಮೆ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ್ದಾರೆ. ಇನ್ನು ಮತ್ತೊಂದೆಡೆ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಯ ಮಗನ ವಿಚಾರಣೆ ಕೂಡ ನಡೆಯುತ್ತಿದೆ. ಎಸ್​ಐಟಿ ಅಧಿಕಾರಿಗಳು DGP ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬುವವರ ವಿಚಾರಣೆ ನಡೆಸಿದ್ದಾರೆ.

2016 ರಿಂದ 2017ರ ಅವಧಿಯಲ್ಲಿ ನಡೆದಿದ್ದ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಶ್ರೀಕಿ 5.5 ಕೋಟಿ ಮೌಲ್ಯದ 150 ಬಿಟ್ ಕಾಯಿನ್​ಗಳ ವ್ಯವಹಾರ ನಡೆಸಿದ್ದ. ಈ ವ್ಯವಹಾರವನ್ನು ಕೊಲ್ಕತ್ತಾದ ರಾಬಿನ್ ಖಂಡೇವಾಲ ಮೂಲಕ ಮಾಡಿಸಿದ್ದ. ಈ ವೇಳೆ ಲ್ಯಾವೆಲ್ಲಿ ರಸ್ತೆಯ ಫ್ರಂಡ್ಲಿಆಟೋಮೋಟಿವ್ಸ್ ನಿಂದ 57 ಲಕ್ಷಕ್ಕೆ ಕಾರು ಖರೀದಿ ಮಾಡಿದ್ದರು. ನಂತರ ಕಬ್ಬನ್ ಪಾರ್ಕ್ ವ್ಯಾಪ್ತಿಯ ಫರ್ಜಿ ಕೆಫೆ ಗಲಾಟೆಯಲ್ಲಿ ಶ್ರೀಕಿ, ಮಹಮದ್ ನಲಪಾಡ್ ಸೇರಿ ಆರು ಏಳು ಜನರು ಭಾಗಿಯಾಗಿದ್ರು. ಬಳಿಕ ಜೆಪಿ ನಗರದಲ್ಲಿ ಶ್ರೀಕಿ ಇಟ್ಟುಕೊಂಡಿದ್ದ ಪೋರ್ಶೆ ಕಾರನ್ನು ವಾಪಸ್ಸು ನೀಡಿದ್ದ. ಈ ಸಮಯದಲ್ಲಿ ನಲವತ್ತು ಲಕ್ಷದ ಚೆಕ್ ಅನ್ನು ರಿಷಬ್ ಹೆಸರಿಗೆ ಪಡೆಯಲಾಗಿತ್ತು. ಅಕ್ರಮವಾಗಿ ಸಂಪಾದನೆ ಮಾಡಿದ್ದ ಬೆಟ್ ಕಾಯಿನ್ ನಿಂದ ಖರೀದಿ ಮಾಡಿ ಮಾರಾಟ ಮಾಡಿದ್ದ ಹಣ ಪಡೆದ ಆರೋಪ ರಿಷಬ್ ಮೇಲೆ ಇದೆ. ಈ ಹಿನ್ನೆಲೆ ಎಸ್​ಐಟಿ ಅಧಿಕಾರಿಗಳು ನಿನ್ನೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಳೆ ಅವಾಂತರ: 8 ವಲಯಗಳ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಸಭೆ, ಕಟ್ಟುನಿಟ್ಟಿನ ಸೂಚನೆ

ವಿಚಾರಣೆಗೆ ಹಾಜರಾದ ಡಿವೈಎಸ್ಪಿ

ಕಳೆದ 5 ದಿನಗಳ ಹಿಂದೆ ಬಿಟ್ ಕಾಯಿನ್ ಅಕ್ರಮ ಪ್ರಕರಣದ ಸಾಕ್ಷ್ಯ ನಾಶಪಡಿಸಿದ್ದ ಆರೋಪದಡಿ ಸಿಐಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಡಿವೈಎಸ್ಪಿ ಶ್ರೀಧರ್ ಪೂಜಾರ ಅವರು ಹಾಜರಾಗಿದ್ದರು.

ಈ ಪ್ರಕರಣ ದಾಖಲಾದ ನಂತರ ಕೆಲವು ಬಾರಿ ವಿಚಾರಣೆಗೆ ಹಾಜರಾಗಿ ನಂತರ ತಲೆಮರೆಸಿಕೊಂಡಿದ್ದರು. ಹೀಗಾಗಿ ಅವರ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು. ನ್ಯಾಯಾಲಯದ ಮೆಟ್ಟಿಲೇರಿದ್ದ ಶ್ರೀಧರ್ ಪೂಜಾರ, ಜಾಮೀನು ಪಡೆದ್ರು. ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ಜಾಮೀನಿಗೆ ಷರತ್ತು ವಿಧಿಸಲಾಗಿತ್ತು.

ಇನ್ನು ಈ ಪ್ರಕರಣದ ತನಿಖಾಧಿಕಾರಿ ಆಗಿರುವ ಸಿಐಡಿ ಡಿವೈಎಸ್ಪಿ ಬಾಲರಾಜು ಅವರ ಕೊಠಡಿಗೆ ಶ್ರೀಧರ್ ಪೂಜಾರ ಹಾಜರಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಬಾಲರಾಜು ರಜೆ ಪಡೆದಿದ್ದು ಪೂಜಾರ ಅವರಿಂದ ಸಹಿ ಪಡೆದುಕೊಂಡ ಕಚೇರಿ ಸಿಬ್ಬಂದಿ, ಕೆಲ ದಿನಗಳ ನಂತರ ಪುನಃ ವಿಚಾರಣೆಗೆ ಬರುವಂತೆ ಹೇಳಿ ವಾಪಸು ಕಳುಹಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ