ಕಾಂಗ್ರೆಸ್​​ ಕೊರಳಿಗೇ ಸುತ್ತುಕೊಂಡಿತಾ ಸ್ಟಿಂಗ್​​ ಆಪರೇಷನ್?: ನಮ್ಮವರೇ ಇದ್ದಾರೆ ಎಂದ ಯತೀಂದ್ರ, ಹರಿಪ್ರಸಾದ್​ ನಡೆ ಬಗ್ಗೆಯೂ ಕುತೂಹಲ

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಕೈವಾಡವಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಇದು ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಸಚಿವರು ಮತ್ತು ರಾಜ್ಯ ಬಿಜೆಪಿಯ ನಾಯಕರೊಬ್ಬರು ಸ್ಟಿಂಗ್​​ ಹಿಂದಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿತ್ತಾದರೂ ವಿಚಾರವೀಗ 'ಕೈ' ಮನೆಯ ಬಾಗಿಲಿಗೇ ಬಂದು ನಿಂತಿದೆ.

ಕಾಂಗ್ರೆಸ್​​ ಕೊರಳಿಗೇ ಸುತ್ತುಕೊಂಡಿತಾ ಸ್ಟಿಂಗ್​​ ಆಪರೇಷನ್?: ನಮ್ಮವರೇ ಇದ್ದಾರೆ ಎಂದ ಯತೀಂದ್ರ, ಹರಿಪ್ರಸಾದ್​ ನಡೆ ಬಗ್ಗೆಯೂ ಕುತೂಹಲ
ಕಾಂಗ್ರೆಸ್​​ ಕೊರಳಿಗೇ ಸುತ್ತುಕೊಂಡಿತಾ ಸ್ಟಿಂಗ್​​ ಆಪರೇಷನ್?

Updated on: Oct 23, 2026 | 2:40 PM

ಬೆಂಗಳೂರು, ಅಕ್ಟೋಬರ್​​ 23: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಸ್ಟಿಂಗ್​​ ಆಪರೇಷನ್​​ ವಿಚಾರವೀಗ ಕಾಂಗ್ರೆಸ್​​ ಕೊರಳಿಗೇ ಸುತ್ತಿಕೊಂಡಿತಾ ಎಂಬ ಪ್ರಶ್ನೆ ಉದ್ಬವಿಸಿದೆ. ವಿಪಕ್ಷಗಳು ಮಂತ್ರಿಗಳ ಸ್ಟಿಂಗ್​​ ನಡೆಸಲು ಮುಂದಾಗಿವೆ. ತನ್ನನ್ನೂ ಟ್ರ್ಯಾಪ್​​ ಮಾಡಲು ಯತ್ನ ನಡೆದಿತ್ತು ಎಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಹೇಳಿದ್ದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೋರ್ಟ್​​ಗೆ ಹೋಗಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದರು. ಕೇಂದ್ರದ ಸಚಿವರು ಮತ್ತು ರಾಜ್ಯ ಬಿಜೆಪಿಯ ನಾಯಕರೊಬ್ಬರು ಸ್ಟಿಂಗ್​​ ಹಿಂದಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿತ್ತಾದರೂ ವಿಚಾರವೀಗ ‘ಕೈ’ ಮನೆಯ ಬಾಗಿಲಿಗೇ ಬಂದು ನಿಂತಿದೆ. ಸಚಿವ ಯತಿಂದ್ರ ಸಿದ್ದರಾಮಯ್ಯ ನೀಡಿರುವ ಸ್ಫೋಟಕ ಹೇಳಿಕೆ, ಕಾಂಗ್ರೆಸಿಗರೇ ಸಿದ್ದರಾಮಯ್ಯನವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಇಂಬು ನೀಡಿದೆ.

‘ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ’

Yathindra Siddaramaih: ಅಪ್ಪನ ತೇಜೋವಧೆ ಮಾಡಿ ಬ್ಲ್ಯಾಕ್​ಮೇಲ್ ಮಾಡೋಕೆ ಸ್ಟಿಂಗ್ ವಿಡಿಯೋ ಮಾಡಿದ್ರು!| #TV9D

ಹೌದು, ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ತಂದೆ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನೆಲೆಗೆ ತರಲಾಗಿದೆ. ತೇಜೋವಧೆ ಮಾಡಿ ಬ್ಲ್ಯಾಕ್​ಮೇಲ್ ಮಾಡಲು ಯತ್ನ ನಡೆದಿದೆ ಎಂದಿದ್ದಾರೆ. ಅಲ್ಲದೆ, ಪುತ್ತೂರು ಟಿಕೆಟ್​ಗಾಗಿ ಓರ್ವ ಮಹಿಳೆಯ ಪಾತ್ರ ಈ ಪ್ರಕರಣದಲ್ಲಿದೆ. ಆ ಮಹಿಳೆ ಕೂಡ ನಮ್ಮ ಪಕ್ಷದವರು. ಸ್ಟಿಂಗ್ ಮಾಡಿ ಟಿಕೆಟ್​ಗೆ ಬ್ಲ್ಯಾಕ್​ಮೇಲ್​ ಮಾಡಲು ಯತ್ನಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ 40 ವರ್ಷದಿಂದ ಕಳಂಕ ಇಲ್ಲದೆ ರಾಜಕಾರಣ ಮಾಡಿದ್ದ ಸಿದ್ದರಾಮಯ್ಯನವರು ಬೇಸರಗೊಂಡಿದ್ದಾರೆ. ಸತ್ಯ ನಮ್ಮ ಕಡೆ ಇದೆ, ಅದು ಹೊರಗೆ ಬರುತ್ತದೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ‘ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ’: ಹೆಚ್​​.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

‘ನಮ್ಮ ಪಕ್ಷದವರೇ ಇದ್ದಿದ್ದು ಸಾಕ್ಷ್ಯ ಸಿಕ್ಕದರೆ ಕ್ರಮ’

ಸ್ಟಿಂಗ್ ಆಪರೇಷನ್ ಯಾರಾದರೂ ಕಾಂಗ್ರೆಸ್ ಪಕ್ಷದವರು ಇದ್ದರೆ ಶೋಕಾಸ್ ನೋಟಿಸ್​ ಕೊಡಿ ಅಂತಾ ಈಗಾಗಲೇ ಸೂಚಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ತಿಳಿಸಿದ್ದಾರೆ. ಸೇಡು ತೀರಿಸಿಕೊಳ್ಳೋಕೆ ಕೆಲವರು ಮಾಡುವ ಹೀನ ಕೃತ್ಯ ಇದಾಗಿದ್ದು, ಈ ರೀತಿ ಆಗಬಾರದೆಂದು ನಿರಂತರವಾಗಿ ಹೇಳಿಕೊಂಡೇ ಬಂದಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ಮಾಡುವುದಕ್ಕೆ ಸಿಐಡಿ, ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ಬಹಳ ಹಿಂದಿನಿಂದ ತನಿಖೆ ಆಗಬೇಕು ಎಂದವರು ಹೇಳಿದ್ದಾರೆ. ಸಿದ್ದರಾಮಯ್ಯ ಭೇಟಿ ಮಾಡ್ತೇನೆಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅಷ್ಟೊಂದು ವೀಕ್ ಮನುಷ್ಯ ಅಲ್ಲ. ಕುಮಾರಸ್ವಾಮಿಗೆ ಎಷ್ಟು ಧೈರ್ಯ ಇದೆಯೋ, ಅದಕ್ಕಿಂತ ಜಾಸ್ತಿ ಧೈರ್ಯ ಸಿದ್ದರಾಮಯ್ಯಗೆ ಇದೆ. ಸ್ಟಿಂಗ್ ವಿಚಾರವನ್ನು ರಾಜಕೀಯವಾಗಿ ಎದುರಿಸ್ತೇವೆ. ನಮ್ಮ ಪಕ್ಷದವರೇ ಇದ್ದಿದ್ದು ಸಾಕ್ಷ್ಯ ಸಿಕ್ಕದರೆ ಕ್ರಮ ತೆಗೆದುಕೊಳ್ತೇನೆ. ಯಾವುದಾದರೂ ಪುರಾವೆ ಬೇಕು, ಅಪಾದನೆ ಮಾಡಿದರೆ ಆಗಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us