ಬಿಎಂಟಿಸಿಯಲ್ಲಿ ಡಿಜಿಟಲ್ ಕ್ರಾಂತಿ: ಯುಪಿಐನಿಂದಲೇ ಶೇ.51ಕ್ಕೂ ಹೆಚ್ಚು ಟಿಕೆಟ್ ಆದಾಯ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಾಗಿದ್ದು, ಸಂಸ್ಥೆಯ ಒಟ್ಟು ಟಿಕೆಟ್ ಆದಾಯದಲ್ಲಿ ಯುಪಿಐಪಾಲು ಶೇಕಡಾ 51ಕ್ಕಿಂತಲೂ ಅಧಿಕ ತಲುಪಿದೆ. ಡೈನಾಮಿಕ್ QR ಕೋಡ್ ವ್ಯವಸ್ಥೆಯಿಂದ ಸಂಸ್ಥೆಗೆ ಈ ವರ್ಷ್ 313.4 ಕೋಟಿ ಆದಾಯ ಹರಿದುಬಂದಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆಗಳು ಮುಂದುವರಿದಿದ್ದು, ನಗರದ ಹೊರವಲಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದೆ.

ಮುಖ್ಯಾಂಶಗಳು
- BMTCಯಲ್ಲಿ ಯುಪಿಐ ಪಾವತಿ ಮೂಲಕ ಟಿಕೆಟ್ ಖರೋದಿ ಹೆಚ್ಚಳ
- ಈ ವರ್ಷದ ಆದಾಯದಲ್ಲಿ 313.4 ಕೋಟಿ UPI ಮೂಲಕ ಪಾವತಿ
- ಡಿಜಿಟಲ್ ಪಾವತಿ ಹೆಚ್ಚಳದ ನಡುವೆಯೂ ಬಗೆಹರಿಯದ ನೆಟ್‌ವರ್ಕ್ ಸಮಸ್ಯೆ
ಬೆಂಗಳೂರು, ಆಗಸ್ಟ್ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಯುಪಿಐ (UPI) ಮೂಲಕ ಟಿಕೆಟ್ ಖರೀದಿ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಥೆಯ ಒಟ್ಟು ಟಿಕೆಟ್ ಆದಾಯದ ಶೇ.50ಕ್ಕೂ ಹೆಚ್ಚು ಈ ಮೂಲಕವೇ ಸಂಗ್ರಹವಾಗುತ್ತಿದೆ. ಆದರೆ, ನೆಟ್‌ವರ್ಕ್ ಸಮಸ್ಯೆ ಮತ್ತು ವಹಿವಾಟು ವಿಫಲವಾಗುವ ಘಟನೆಗಳು ಇನ್ನೂ ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ತೊಂದರೆ ಉಂಟುಮಾಡುತ್ತಿವೆ ಎನ್ನಲಾಗಿದೆ.
UPI ಮೂಲಕ ಈ ವರ್ಷ 313.4 ಕೋಟಿ ಆದಾಯ
ಬಿಎಂಟಿಸಿ ಅಂಕಿಅಂಶಗಳ ಪ್ರಕಾರ, 2025ರ ಜನವರಿಯಲ್ಲಿ ಒಟ್ಟು ಆದಾಯದಲ್ಲಿ ಯುಪಿಐ ಪಾಲು ಶೇ.22.2 ಇದ್ದರೆ, ಡಿಸೆಂಬರ್ ವೇಳೆಗೆ ಅದು ಶೇ.50.9ಕ್ಕೆ ಏರಿಕೆಯಾಗಿದೆ. ಈ ವರ್ಷ ಜನವರಿ 1ರಿಂದ ಜುಲೈ 30ರವರೆಗೆ ಬಿಎಂಟಿಸಿಯ ಒಟ್ಟು 609.5 ಕೋಟಿ ಟಿಕೆಟ್ ಆದಾಯದಲ್ಲಿ 313.4 ಕೋಟಿ ಯುಪಿಐ ಮೂಲಕ ಬಂದಿದೆ. ಅಂದರೆ ಒಟ್ಟು ಆದಾಯದಲ್ಲಿ ಶೇ.51.4 ಡಿಜಿಟಲ್ ಪಾವತಿಯ ಪಾಲಾಗಿದೆ.
ಇದನ್ನೂ ಓದಿ: ಬರ್ತ್‌ಡೇ, ಪ್ರಿವೆಡ್ಡಿಂಗ್ ಶೂಟ್ಗೆ ಬಾಡಿಗೆಗೆ ಸಿಗುತ್ತೆ ಡಬಲ್ ಡೆಕ್ಕರ್ ಅಂಬಾರಿ ಬಸ್, ಬಾಡಿಗೆ ಎಷ್ಟು?
ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿ
ಟಿಕೆಟ್ ಖರೀದಿಯನ್ನು ಸುಲಭಗೊಳಿಸಲು ಹಾಗೂ ನಗದು ವಹಿವಾಟು ಕಡಿಮೆ ಮಾಡಲು ಬಿಎಂಟಿಸಿ ಸುಮಾರು ಆರು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳಲ್ಲಿ (ETM) ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿಗೆ ತಂದಿದೆ. ಈ ಮೊದಲು ಬಸ್‌ಗಳಲ್ಲಿ ಅಂಟಿಸಲಾಗಿದ್ದ ಸ್ಟ್ಯಾಟಿಕ್ QR ಕೋಡ್ ಮೂಲಕ ಪ್ರಯಾಣಿಕರು ಮುಂಚಿತವಾಗಿ ಪಾವತಿ ಮಾಡಬಹುದಾಗಿತ್ತು. ಆದರೆ ಕೆಲವರು ನಕಲಿ ಅಥವಾ ಎಡಿಟ್ ಮಾಡಿದ ಪಾವತಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ವಂಚನೆ ನಡೆಸಿದ ಹಿನ್ನೆಲೆಯಲ್ಲಿ ಆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.
ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆ
ಡಿಜಿಟಲ್ ಪಾವತಿ ಹೆಚ್ಚಾದರೂ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ನಿರ್ವಾಹಕರು ಪ್ರಯಾಣಿಕರ ಗಮ್ಯಸ್ಥಾನ ನಮೂದಿಸಿದ ಬಳಿಕವೇ QR ಕೋಡ್ ಸೃಷ್ಟಿಯಾಗುತ್ತದೆ. ಆದರೆ ನೆಟ್‌ವರ್ಕ್ ನಿಧಾನವಾಗಿದ್ದರೆ ಅಥವಾ ಸಿಗ್ನಲ್ ಇಲ್ಲದಿದ್ದರೆ QR ಕೋಡ್ ಸೃಷ್ಟಿಯಾಗಲು ವಿಳಂಬವಾಗುತ್ತದೆ. ನಗರದ ಹೊರವಲಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Thu, 6 August 26




