ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆಯಿಂದಾಗಿ ರಾಜ್ಯದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಸಂಸದ ತೇಜಸ್ವಿ ಸೂರ್ಯ ನೀಡಿದಂತಹ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ಖಂಡನೆ ವ್ಯಕ್ತವಾಗುತ್ತಿದೆ.
ಪ್ರಚೋದನಕಾರಿ ಹೇಳಿಕೆಯಿಂದ ಇಂತಹ ಘಟನೆಗಳು ಆಗ್ತಿವೆ
ಬೆಂಗಳೂರಿನಲ್ಲಿ ‘ಕೈ’ ನಾಯಕ ದಿನೇಶ್ ಗುಂಡೂರಾವ್, ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ಕೊಟ್ಟು, ಕೊಟ್ಟು ಬಲಿ ತೆಗೆದುಕೊಂಡಿದ್ದಾರೆ. ಅವರ ಮನೆ ಮೇಲೆ ಅವರೇ ಕಲ್ಲು ಹೊಡೆದುಕೊಳ್ಳಬೇಕು. ಈ ಹಿಂದೆ ಈ ರೀತಿಯ ಸಾವು ಆಗಲಿ ಎಂದು ಕಾದು ಕುಳಿತಿದ್ದರು. ಹಿಂದೆ ವೈಯಕ್ತಿಕ ಸಾವುಗಳನ್ನು ರಾಜಕೀಯ ದ್ವೇಷದ ಸಾವುಗಳಾಗಿ ಮಾಡಿದ್ರು. ಹತ್ಯೆಗಳು ಎಲ್ಲಾ ಸರ್ಕಾರದಲ್ಲೂ ಆಗಿವೆ. ಆದರೆ ಹತ್ಯೆಗಳಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣ ಮಾಡಿದ್ರೆ ಅವರದ್ದೆ ಪಕ್ಷದ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ತೇಜಸ್ವಿ ಸೂರ್ಯನೂ ಹಾಗೂ ಬಿಜೆಪಿ ನಾಯಕರ ಪ್ರಚೋದನೆಕಾರಿ ಹೇಳಿಕೆಗಳಿಂದ ಈ ರೀತಿಯ ಹತ್ಯೆ ಅಗುತ್ತಿದೆ ಎಂದರು.
ಇನ್ನು ಕಾಂಗ್ರೆಸ್ ಸಾಕಿದ ಗಿಣಿಯೇ ಪ್ರವೀಣ್ ಹತ್ಯೆ ಮಾಡಿದ್ದಾರೆ ಎಂಬ ಬಿಜೆಪಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಶವದ ಮೇಲೆ ರಾಜಕೀಯ ಮಾಡುವುದು ಬಿಡೊಲ್ಲ. ಪ್ರವೀಣ್ ಸಾವು ನೋವಿನ ಸಂಗತಿ. ಇದರ ಹಿಂದೆ ಯಾರಿದ್ದಾರೆ ಅನ್ನೊದು ಮೊದಲು ತನಿಖೆ ಆಗಬೇಕು. ಅವರ ಪಕ್ಷದ ಕಾರ್ಯಕರ್ತರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಬಿಜೆಪಿ ಅವರು ಇಂತಹ ಹೇಳಿಕೆ ಕೊಡುತಿದ್ದಾರೆ ಎಂದರು.
ಇಂತವರನ್ನು ಗೆಲ್ಲಿಸಿದ ಮೇಲೆ ಈ ರೀತಿಯ ಮಾತುಗಳನ್ನು ಕೇಳಲೇಬೇಕು
ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ತೇಜಸ್ವಿ ಸೂರ್ಯ ಹೇಳಿಕೆಗೆ ಗರಂ ಆಗಿದ್ದಾರೆ. ಇಂತವರನ್ನು ಗೆಲ್ಲಿಸಿದ ಮೇಲೆ ಈ ರೀತಿಯ ಮಾತುಗಳನ್ನು ಕೇಳಲೇಬೇಕು. ನಿಮ್ಮನ್ನು ಯಾರು ಗನ್ ಮ್ಯಾನ್ ಕೊಡಿ ಅಂತಾ ಕೇಳಲ್ಲ. ಶಾಂತಿಯುತವಾದ ನೆಮ್ಮದಿಯ ಆಡಳಿತ ಕೊಡಿ ಅಂತಾ ಕೇಳುತ್ತಾರೆ ಅಷ್ಟೇ. ಚುನಾವಣೆ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಉದಾಹರಣೆ. ಹಿಂದೆ ಚುನಾವಣೆ ಬಂದಾಗ ದೇಶದ ಎಲ್ಲಾ ಭಾಗದಲ್ಲೂ ಈ ರೀತಿ ಆಗಿದೆ ಎಂದು 2016ರ ಯುಪಿ ಚುನಾವಣೆ ಉದಾಹರಣೆ ನೀಡಿದ ಹೆಚ್ಡಿಕೆ ಮುಜಾಫರ್ ನಗರದಲ್ಲಿ ಕೋಮು ಗಲಭೆ ಆಯ್ತು ಎಂದರು. ಇಂದಿಗೂ ಅದರ ಹಿಂದೆ ಇದ್ದವರು ಯಾರು? ಏಕೆ ಆಯ್ತು? ಗೊತ್ತಾಗಿಲ್ಲ. ಬಿಜೆಪಿಯ ಬಣ್ಣ ಬಣ್ಣದ ಜಾಹಿರಾತು ನೋಡಿ ಮುಂದುವರಿದರೆ ಮತ್ತಷ್ಟು ಕೆಟ್ಟ ಕಾಲ ಬರಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ. ಇವರಿಗೆ ಧರ್ಮದ ಹೆಸರಿನ ಸಾವುಗಳಾದರೆ ಹಿಂದೂ ಧರ್ಮದ ಬದ್ದತೆಯಿರುವ ಕಳಕಳಿಯಿರುವ ಕುಟುಂಬದಲ್ಲಿ ಹತ್ಯೆಯಾದರೆ ಫಸಲು. ಇವರಿಗೆ ಬದುಕು ಕಟ್ಟುವುದು ಬೇಡ ಇಂತಹ ಘಟನೆಯ ಮೇಲೆ ಸೌಧ ಕಟ್ಟಬೇಕು. ರಾಜ್ಯದಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?
ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಈ ವಿಚಾರವಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ಗೆ ಸಂಸದ ತೇಜಸ್ವಿ ಸೂರ್ಯ ಕರೆ ಮಾಡಿದ್ದರು. ಈ ವೇಳೆ ಅವರು, ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ವೈರಲ್ ಆಗಿದೆ
Published On - 7:16 pm, Thu, 28 July 22