ಗೃಹ ಸಚಿವ ಡಾ.ಜಿ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್; ಡಿಸಿಎಂ ಹೊರಗಿಟ್ಟು ಆಪ್ತರ ಜೊತೆ ಸಿಎಂ ಚರ್ಚೆ

| Updated By: ಆಯೇಷಾ ಬಾನು

Updated on: Oct 28, 2023 | 7:06 AM

ಸಿಎಂ ಸಿದ್ದರಾಮಯ್ಯ ಶುಕ್ರವಾರ ರಾತ್ರಿ ತನ್ನ ಆಪ್ತ ಸಚಿವರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಔತಣಕೂಟದ ಜೊತೆಗೆ ಪಕ್ಷದಲ್ಲಿದ್ದ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿದೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್; ಡಿಸಿಎಂ ಹೊರಗಿಟ್ಟು ಆಪ್ತರ ಜೊತೆ ಸಿಎಂ ಚರ್ಚೆ
ಡಿಕೆ ಶಿವಕುಮಾರ್ & ಸಿದ್ದರಾಮಯ್ಯ
Follow us on

ಬೆಂಗಳೂರು, ಅ.28: ಕಾಂಗ್ರೆಸ್ ಪಕ್ಷದಲ್ಲಿ‌ ಆಗುತ್ತಿರುವ ಬೆಳವಣಿಗೆಗಳ ಕುರಿತು ಅ.27ರ ಶುಕ್ರವಾರ ರಾತ್ರಿ ಸಿಎಂ ಸಿದ್ದರಾಮಯ್ಯ (Siddaramaiah) ತನ್ನ ಆಪ್ತ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G Parameshwar) ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಸತೀಶ್ ಜಾರಕಿಗೊಳಿ ಔತಣಕೂಟ ನೆಪದಲ್ಲಿ ರಾಜಕೀಯ ಚರ್ಚೆ ನಡೆಸಿದ್ದಾರೆ. ಮೂರು ತಾಸಿಗೂ ಹೆಚ್ಚು ಕಾಲ ಪರಂ ನಿವಾಸದಲ್ಲಿ ರಾಜಕೀಯ ಕುರಿತಾದ ಬಿಸಿಬಿಸಿ ಚರ್ಚೆ ನಡೆಸಲಾಯ್ತು.

ಇನ್ನೂ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಊಟಕ್ಕೊಸ್ಕರ ಸೇರಿದ್ವಿ ಸಿಎಂ ಅವರು ನಮ್ಮ ಮನೆಗೆ ಬಂದಿದ್ರು. ನಾನು ಸತೀಶ್, ಮಹಾದೇವಪ್ಪನವರು ಊಟಕ್ಕೆ ಸೇರಿದ್ವಿ. ಊಟ ಮಾಡಿದ್ವಿ ಅಷ್ಟೇ ಬೇರೆ ಏನು ಚರ್ಚೆಯಾಗಿಲ್ಲ. ನಿಗಮ ಮಂಡಳಿಯ ಬಗ್ಗೆ ಇಲ್ಲಿ ಚರ್ಚೆ ಮಾಡೋಕಾಗುತ್ತಾ? ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ ಎಂದರು.

ನಾನು ಸಿಎಂ ಎಲ್ಲಾ ಊಟಕ್ಕೆ ಬಂದಿದ್ವಿ. ನಾವು ಸೇರಿದ ಮೇಲೆ ರಾಜಕೀಯ ಅಲ್ಲದೇ ಬೇರೆ ಏನು ಮಾತಾಡೋದು ಅಂತ ಸಭೆ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಣ್ಣಪುಟ್ಟ ರಾಜಕೀಯ ಚರ್ಚೆಯಾಗಿದೆ. ರಾಜಕೀಯ, ರಾಜಕಾರಣ ಎಂದ ಮೇಲೆ ಸಣ್ಣ ಪುಟ್ಟ ಅಸಮಾಧಾನ ಇದ್ದೆ ಇರುತ್ತೆ.‌ ಮಾತುಕತೆಗಳು ಅಗಾಗ ಅಗ್ತಿರ್ತಾವೆ ಅದು ಬಿಟ್ಟು ಬೇರೆ ಏನು ಇಲ್ಲ.‌ನಿಗಮ ಮಂಡಳಿಯ ನೇಮಕದ ಬಗ್ಗೆ ಚರ್ಚೆಯಾಗಿಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರಹಸ್ಯ ಸ್ಥಳದಲ್ಲಿ ಚರ್ಚೆ ನಡೆಸಿರುವ ಸಿಎಂ, ಡಿಸಿಎಂ

ಶುಕ್ರವಾರ ಮಧ್ಯಾಹ್ನವೂ ಸಹ ರಹಸ್ಯ ಸ್ಥಳದಲ್ಲಿ ಸುಮಾರು ಎರಡು ತಾಸುಗೂ ಹೆಚ್ಚು ಕಾಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಚರ್ಚೆ ನಡೆಸಿದ್ದಾರೆ. ಮಧ್ಯಾಹ್ನ ಭೇಟಿ ಮಾಡಿ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಇದೀಗ ಪರಮೇಶ್ವರ್ ನಿವಾಸದಲ್ಲಿ ಭೇಟಿ ಮಾತುಕತೆ ನಡೆಸಲಾಗಿದ್ದು, ಭಾರೀ ಕುತೂಹಲದ ಬೆಳವಣಿಗೆ ಕಾರಣವಾಗಿದೆ.

ಇದನ್ನೂ ಓದಿ: ‘ಕಲೆಕ್ಷನ್ ಮಾಸ್ಟರ್’ಎಂದು ಸಿಎಂ ಸಿದ್ದರಾಮಯ್ಯ ಫೋಟೋ ಪೋಸ್ಟ್: ಶಾಸಕ ಹರೀಶ್ ಪೂಂಜ ವಿರುದ್ಧ FIR

ಇನ್ನೂ ಈ ಡಿನ್ನರ್ ಮೀಟಿಂಗ್ ನಲ್ಲಿ‌ ರಾಜಕೀಯದ ಸಾಕಷ್ಟು ವಿದ್ಯಮಾನಗಳ ಕುರಿತು ಚರ್ಚೆಗಳು ನಡೆದಿದೆ. ರಾಜಕೀಯ ಸ್ಥಿತ್ಯಂತರದ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ‌ ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತ ಮಾತುಕತೆ ನಡೆದಿದೆ. ಬಣ ರಾಜಕೀಯ ಆದರೆ, ಅದರ ಮೇಲೆ ಹಿಡಿತ ಸಾಧಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ. ದಲಿತ ನಾಯಕರನ್ನ ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಅಹಿಂದ ವರ್ಗದ ಮತ ಪ್ರಾಬಲ್ಯಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ದಲಿತ ವರ್ಗದವರನ್ನ ಜೊತೆಯಲ್ಲಿ ಇಟ್ಟಿಕೊಳ್ಳುವ ಮೂಲಕ ಹೈಕಮಾಂಡ್ ಸಂದೇಶ ರವಾನೆ ಮಾಡೋಕೆ‌ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆ ಆದ್ರೂ ಕೂಡ ಸಿಎಂ ಸಿದ್ದರಾಮಯ್ಯ ಮಾತು ಮಹತ್ವದ್ದಾಗಿರುತ್ತೆ.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅವಧಿ ವಿಚಾರಕ್ಕೆ ಈಗಾಗಲೇ ಕೂಗು ಎದ್ದಿದೆ. ಇದಕ್ಕೆ ಸಂಬಂಧಿಸಿದಂತೆ ದಲಿತ ಸಿಎಂ ಕಾರ್ಡನ್ನ‌ ಸಹ ಚರ್ಚಿಸಲಾಗಿದೆ. ಎರಡೂವರೆ ವರ್ಷದ ಬಳಿಕ‌ ಡಿಸಿಎಂ ಡಿಕೆ‌ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಶಾಸಕ ರವಿ ಗಾಣಿಗ ಹೇಳಿದ್ದಾರೆ. ಇದಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲಿ ದಲಿತ ಸಿಎಂ ಕೂಗು ಎದ್ದರೂ ಅಚ್ಚರಿ ಇಲ್ಲ. ಅಹಿಂತ ನಾಯಕತ್ವವನ್ನ ಸಿಎಂ ಸಿದ್ದರಾಮಯ್ಯ ಒಗ್ಗಟ್ಟಾಗಿ ಇಟ್ಟುಕೊಂಡಿದ್ದಾರೆ. ಒಬಿಸಿ ಜೊತೆ ದಲಿತರನ್ನೂ ಸೇರಿಸಿ ಒಗ್ಗಟ್ಟಾಗಿ ಇಟ್ಟುಕೊಳ್ಳುವ ಮೂಲಕ ಹೈಕಮಾಂಡ್ ಗೂ ಸಂದೇಶ ರವಾನೆ ಮಾಡಲು ಮುಂದಾಗಿದ್ದಾರೆ. ಈ ಎಲ್ಲ ವಿಚಾರಗಳು ಡಿನ್ನರ್ ಮೀಟಿಂಗ್ ನಲ್ಲಿ ಚರ್ಚೆ ಆಗಿದೆ ಎನ್ನಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ