ನವದೆಹಲಿ, ಡಿ.08: ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ನಿರಾಕರಿಸಿತ್ತು. ಬಳಿಕ ಜಮೀರ್ ಅವರು ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್(Supreme Court)ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು(ಡಿ.08) ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠವು, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ತನಿಖೆಗೆ ನೀಡಿದ್ದ ಮಧ್ಯಂತರ ತಡೆಯ ಮುಂದುವರಿಕೆಗೆ ಆದೇಶಿಸಿದೆ.
2022 ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ, ಇಡಿ ದಾಳಿ ಮಾಡಿತ್ತು. ಈ ವೇಳೆ ಅವರ ಆದಾಯದಲ್ಲಿ 2000% ಕ್ಕಿಂತ ಹೆಚ್ಚಿದೆ ಎಂದು ಆರೋಪಿಸಲಾಗಿತ್ತು. ಬರೊಬ್ಬರಿ 87.44 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಜಮೀರ್ ವಿರುದ್ಧ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣವನ್ನು ನ.20 ರಂದು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.
ಇದನ್ನೂ ಓದಿ:ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಚಿವ ಜಮೀರ್ ಅಹ್ಮದ್ ಖಾನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಈ ಹಿನ್ನಲೆ ಜಮೀರ್ ಅಹ್ಮದ್ ಖಾನ್, ಕೇಸ್ನ ತನಿಖೆಯ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ಮಧ್ಯೆ, ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಮೇಲ್ಮನವಿ ಬಾಕಿ ಹಿನ್ನೆಲೆಯಲ್ಲಿ, ಹೈಕೋರ್ಟ್ ಆದೇಶ ತಡೆಹಿಡಿಯುವಂತೆ ಜಮೀರ್ ಪರ ವಕೀಲರು ಮನವಿ ಮಾಡಿದ್ದರು. ಅದರಂತೆ 30 ದಿನಗಳ ಕಾಲ ತನ್ನ ತೀರ್ಪನ್ನು ಅಮಾನತಿನಲ್ಲಿಟ್ಟು ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶವನ್ನು ನಿರಾಕರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 8 December 23