ಬೆಂಗಳೂರು, ಜ.6: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಗಲಭೆ (DJ Halli KG Halli Riot) ಪ್ರಕರಣದಲ್ಲಿ ಭಾಗಿಯಾಗದಿದ್ದರೂ 37 ಜನರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರು ಆರೋಪಿಸುತ್ತಿದ್ದು, ಇಂದು ನಡೆದ ಜನಸ್ಪಂದನಾ (Janaspandana) ಕಾರ್ಯಕ್ರಮದಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಆರೋಪಿಗಳ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ.
ಹಲಸೂರಿನ RBANMS ಕಾಲೇಜು ಮೈದಾನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಂಧಿತರ ಕುಟುಂಬಸ್ಥರಿಂದ ಡಿಕೆ ಶಿವಕುಮಾರ್ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಕಾನೂನಿನ ಅಡಿಯಲ್ಲಿ ಏಕಾಏಕಿ ಹೇಳಲು ಆಗುವುದಿಲ್ಲ. ಲೀಗಲ್ ಆಗಿ ಬಿಜೆಪಿ ಸರ್ಕಾರ ಕೆಲವು ಸೆಕ್ಷನ್ ಪ್ರಯೋಗ ಮಾಡಿದ್ದಾರೆ. ಅವರಿಗೆ ಬಹಳ ಅನ್ಯಾಯವಾಗಿದೆ, ಜೈಲಿಂದ ಬಿಡುಗಡೆಯಾಗಲು ಆಗುತ್ತಿಲ್ಲ. ಕಾನೂನಿನ ಅಡಿಯಲ್ಲಿ ನಾವು ಅವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು.
ಇದನ್ನೂ ಓದಿ: ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ಬಳ್ಳಾರಿಯಲ್ಲಿಯೂ ಅಶಾಂತಿ ಸೃಷ್ಟಿಸುವ ವಿಫಲ ಯತ್ನ ನಡೆದಿತ್ತು- NIA
ಬಂಧಿತರ ಬಿಡುಗಡೆಗೊಳಿಸುವಂತೆ ನಮ್ಮ ಶಾಸಕರುಗಳು ಹೇಳಿದ್ದಾರೆ. ಚುನಾವಣಾ ಪೂರ್ವದಲ್ಲೂ ಹೇಳಿದ್ದರು. ನಾನು ಮತ್ತೆ ಲೀಗಲ್ ಟೀಂನೊಂದಿಗೆ ಮಾತನಾಡುತ್ತೇನೆ. ಯಾವ ಅಮಾಯಕರಿಗೆ ತೊಂದರೆ ಆಗಬಾರದು ಅನ್ನೋದು ನಮ್ಮ ಉದ್ದೇಶವಾಗಿದೆ. ಯಾರು ಕಾನೂನನ್ನ ಕೈಗೆ ತೆಗೆದುಕೊಂಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಆದರೆ ಅಮಾಯಕರು ತಗಲಾಕಿಕೊಂಡಿರುವುದು ಇದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅನ್ಯಾಯ ಆದವರಿಗೆ ನ್ಯಾಯ ಕೊಡುವುದು ನಮ್ಮ ಕರ್ತವ್ಯ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ನಾಯಕರು ಮುಸ್ಲಿಂ ಓಲೈಕೆ ರಾಜಕಾರಣ ಆರಂಭಿಸಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಅಮಾಯಕರು ಎಂದು ಹೇಳಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ರೀತಿ ಒತ್ತಾಯಿಸಿದವರಲ್ಲಿ ಡಿಕೆ ಶಿವಕುಮಾರ್, ತನ್ವೀರ್ ಸೇಠ್ ಮತ್ತಿತರರು ಸೇರಿದ್ದಾರೆ.
ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಎಸಿ ಶ್ರೀನಿವಾಸ್, ಗಗಲಭೆ ಪ್ರಕರಣದಲ್ಲಿ ಭಾಗಿಯಾದವರು ಅಮಾಯಕರು, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಕೆಜಿ ಹಳ್ಳಿ ಡಿಜೆಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ ಸಂಬಂಧ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮತ್ತು ಸರ್ಕಾರಿ ವಾಹನಗಳಿಗೆ ಹಾನಿ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದಲ್ಲಿ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಗಲಭೆ ಸಂಬಂಧ ಎನ್ಐಎಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಅಧಿಕಾರಿಗಳು ಹಲವರನ್ನು ಬಂಧಿಸಿ ತನಿಖೆ ನಡೆಸುತ್ತಿದೆ. ಈ ಪೈಕಿ ಕೆಲವರನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೂ ಕೆಲವರು ಜೈಲಿನಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ