ಬೆಂಗಳೂರು: ಮಾರ್ಚ್ 17. ಇಂದು ನಾಡಿನಾದ್ಯಂತ ಕರ್ನಾಟಕ ರತ್ನ, ಡಾ.ಪುನಿತ್ ರಾಜ್ಕುಮಾರ್(Puneeth Rajkumar) ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸಿದ್ದಾರೆ. ಅಪ್ಪು ಹುಟ್ಟು ಹಬ್ಬ ಕರುನಾಡಿನ ಹಬ್ಬವಾಗಿ ಬದಲಾಗಿದೆ. ಅಲ್ಲದೆ ಮುಗಿಲೆತ್ತರದ ಅಪ್ಪು ಕಟೌಟ್ಗಳಿಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಅಪ್ಪುರ ಕೊನೆಯ ಚಿತ್ರ ಜೇಮ್ಸ್(James)ಅದ್ಧೂರಿ ಸ್ವಾಗತ ಮಾಡಿದ್ದಾರೆ. ಪುನಿತ್ ಹುಟ್ಟು ಹಬ್ಬದ ದಿನವೇ, ಅವರು ನಟಿಸಿದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗಿದ್ದು ಜೇಮ್ಸ್ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಬೆಂಗಳೂರಿನ ಒರಾಯನ್ ಮಾಲ್ಗೆ ಬಂದಿದ್ದಾರೆ.
ಅಪ್ಪು ಅಭಿನಯದ ‘ಜೇಮ್ಸ್’ ಸಿನಿಮಾ ವೀಕ್ಷಿಸಲು ಡಿಕೆಶಿ ಕುಟುಂಬ ಸಮೇತರಾಗಿ ಬೆಂಗಳೂರಿನ ಒರಾಯನ್ ಮಾಲ್ಗೆ ಭೇಟಿ ನೀಡಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರ ವೀಕ್ಷಣೆಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಸ್ನೇಹಿತನ ಕೊನೆಯ ಸಿನಿಮಾ ವೀಕ್ಷಣೆಗಾಗಿ ಬಂದಿದ್ದೇನೆ. ನಟ ಪುನೀತ್ ರಾಜ್ಕುಮಾರ್ ಒಬ್ಬ ಒಳ್ಳೆಯ ವ್ಯಕ್ತಿ. ಸಮಾಜದಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿದ್ದ ವ್ಯಕ್ತಿ. ಇಂದು ನಮ್ಮೊಂದಿಗಿಲ್ಲ ಅನ್ನೋದು ಬೇಸರದ ಸಂಗತಿ. 30 ವರ್ಷದ ಹಿಂದೆ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದೆ. ಅದನ್ನ ಹೊರತುಪಡಿಸಿದ್ರೆ ಇತ್ತೀಚಿಗೆ ಯಾವುದೇ ಸಿನಿಮಾವನ್ನ ಫರ್ಸ್ಟ್ ಡೇ ನೋಡಿರಲಿಲ್ಲ. ಆದ್ರೆ ಪುನೀತ್ ರಾಜ್ ಕುಮಾರ್ ನನ್ನ ಒಳ್ಳೆಯ ಸ್ನೇಹಿತ. ಅವರು ಮಾಡಿರುವ ಕೊನೆಯ ಚಿತ್ರ ನೋಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಸ್ತೆಗೆ ಅಪ್ಪು ಹೆಸರಿಡುವ ಮೂಲಕ ಹುಟ್ಟುಹಬ್ಬ ಆಚರಣೆ
ಹಾಸನ ರಸ್ತೆಗೆ ಅಪ್ಪು ಹೆಸರು ನಾಮಕರಣ ಮಾಡುವ ಮೂಲಕ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದ ಮುಖ್ಯ ರಸ್ತೆಗೆ ಡಾ.ಪುನೀತ್ ರಾಜ್ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಕೇಕ್ ಕತ್ತರಿಸಿ ಗ್ರಾಮದ ಜನರೆಲ್ಲ ಸಂಭ್ರಮಿಸಿದ್ದಾರೆ. ದೊಡ್ಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸೇರಿ ನೂರಾರು ಜನರು ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಪುನೀತ್ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ‘ಜೇಮ್ಸ್’ ಚಿತ್ರ ನೋಡಲು ಬಂದಿದ್ದೇವೆ: ಮೊಹಮ್ಮದ್ ನಲಪಾಡ್
Published On - 10:52 pm, Thu, 17 March 22