ಬೆಂಗಳೂರು, (ಆಗಸ್ಟ್ 05): ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಇಂದು (ಆಗಸ್ಟ್ 05) ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಬಿ ಪಾಟೀಲ್, ಅತೀ ಶೀಘ್ರದಲ್ಲೇ ಎರಡನೇ ವಿಮಾನ ನಿಲ್ದಾಣ ಆಗಲಿದೆ. ಅದಕ್ಕಾಗಿ ಏಳು ಸ್ಥಳ ಗಮನಕ್ಕೆ ಇದ್ದು, ಈ ಬಗ್ಗೆ ಸಾಧಕ ಬಾಧಕ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರ ಹಾಗೂ ಕರ್ನಾಟಕದ ಜನರಿಗೆ ಅನುಕೂಲ ಆಗಬೇಕು. ರಾಜಕೀಯ ಬಿಟ್ಟು ಎಲ್ಲರಿಗೂ ಅನುಕೂಲ ಆಗುವಂತೆ ನಿರ್ಧಾರ ಕೈಗೊಳ್ಳುವ ಕೆಲಸ ಆಗಬೇಕು ಎಂದು ಹೇಳಿದರು.
ಇನ್ನು ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಈಗ ಇರುವು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇರೋದೇ ಎರಡು ರನ್‌ವೇ, ಮುಂದಕ್ಕೆಎರಡು ರನ್ ವೇ ಸಾಲದು. ಅದಕ್ಕೆ ಮುಂಜಾಗ್ರತವಾಗಿ ಎರಡನೇ ಏರ್ ಪೋರ್ಟ್ ಮಾಡಬೇಕು ಎಂದು ಹತ್ತಾರು ಸಭೆಗಳು ಆಗಿವೆ.ಈಗಲೇ ಇದರ ಬಗ್ಗೆ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ಏಳೆಂಟು ಜಾಗ ನೋಡಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಾ?
ನೀರು, ರಸ್ತೆ ಸೇರಿ ಹಲವು ಸೌಕರ್ಯ ನೋಡಿಕೊಂಡು ಏರ್ ಪೋರ್ಟ್ ಆಗಬೇಕು. ಹಾಗೇ ಭೂಮಿ, ಗುಡ್ಡ ಗಾಡು ನೋಡಿಕೊಂಡು ಆಯ್ಕೆ ಮಾಡುತ್ತಾರೆ. ಇಂದಿನ ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ಸಿಎಂ ಜೊತೆ ಚರ್ಚಿಸಬೇಕಾಗಿದೆ. ಇದೆಲ್ಲಾ ಆದ್ಮೇಲೆ ದೆಹಲಿಗೆ ವರದಿ ಕಳಿಸಬೇಕಾಗುತ್ತದೆ. ಅವರು ಬಂದು ಎಲ್ಲ ವರದಿ ನೋಡಿ ಯಾವ ಸ್ಥಳದಲ್ಲಿ ಏರ್ ಪೋರ್ಟ್ ಮಾಡಲಿದ್ದಾರೆ? ಯಾವಾಗ ಅನುಮತಿ ನೀಡುತ್ತಾರೆ ಅಂದಿನಿಂದ ಕೆಲಸ ಆಗಬೇಕು. 2034ರೊಳಗೆ ಹೊಸ ಏರ್ಪೋರ್ಟ್ ಕೆಲಸ ನಡೆಯಬೇಕು. ಇದಕ್ಕೆ ಸುಮಾರು ನಾಲ್ಕು ಸಾವಿರ ಎಕರೆ ಜಾಗ ಬೇಕಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರು ದೊಡ್ಡ ವಿಮಾನ ನಿಲ್ದಾಣವಾಗಿದೆ. ದೆಹಲಿ,ಮುಂಬೈ ಬಿಟ್ಟರೆ ಮೂರನೆಯದ್ದೇ ಬೆಂಗಳೂರು ಏರ್ ಪೋರ್ಟ್. 150 ಕಿಲೋ ಮೀಟರ್ ನಡುವೆ ನಿಲ್ದಾಣ ಮಾಡುವಂತಿಲ್ಲ. ಈಗ ಎರಡು ರನ್ ವೇ ಗಳಿವೆ. ಇಲ್ಲಿರುವ ಗ್ರೋಥ್ ಗೆ ಈ ಎರಡು ರನ್ ವೇ ಸಾಕಾಗಲ್ಲ. ಒಪ್ಪಂದ ಮುಗಿಯುವುದೊರಳಗೆ ಮತ್ತೊಂದು ಮಾಡಬೇಕು. ಅದು 2034ಕ್ಕೆ ಕ್ಲೋಸ್ ಆಗಲಿದೆ. ಈಗ ಹೊಸ ವಿಮಾನ ನಿಲ್ದಾಣಕ್ಕೆ ಎಂಟೊಂಬತ್ತು ಜಾಗಗಳನ್ನ ನೋಡಿದ್ದಾರೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಐಡೆಕ್ ನವರ ಜೊತೆ ಎಂಬಿಪಿ ಚರ್ಚೆ ಮಾಡಿದ್ದಾರೆ. ಬಾಸ್ಟನ್ ಸಂಸ್ಥೆ ನಮಗೆ ಸಲಹೆ ಕೊಟ್ಟಿದೆ. ಕೇಂದ್ರ, ರಾಜ್ಯ, ಪಬ್ಲಿಕ್ ಷೇರ್ ಮೇಲೆ ಮಾಡಬೇಕಿದೆ. ಟೆಕ್ನಿಕಲ್ ಟೀಂ ನಮಗೆ ವರದಿ ಕೊಟ್ಟಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ನಾವು ಮಾತನಾಡಬೇಕು. ಇದು ಪರ್ಸನ್ ಗ್ರೌಂಡ್ ಮೇಲೆ ಮಾಡಲಾಗಲ್ಲ. ಟೆಕ್ನಿಕಲ್ ಗ್ರೌಂಡ್ ಮೇಲೆ ಅವರು ಮಾಡ್ತಾರೆ. ಸಿಎಂ ಜೊತೆ ಚರ್ಚಿಸಿ ಕಳಿಸಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ