ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಾ? ಎಂಬಿ ಪಾಟೀಲ್ ಹೇಳಿದ್ದಿಷ್ಟು
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಆದ್ರೆ, ಎರಡನೇ ವಿಮಾನ ನಿಲ್ದಾಣಕ್ಕೆ ಈಗಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಒಪ್ಪಂದ ಅಡ್ಡಿಯಾಗಿದೆ. ಇನ್ನು ಈ ಬಗ್ಗೆ ಎಕ್ಸ್ಕ್ಲ್ಯೂಸ್ ಆಗಿ ಸಚಿವ ಎಂಬಿ ಪಾಟೀಲ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
ಬೆಂಗಳೂರು, (ಜೂನ್ 21): ಬೆಂಗಳೂರು ಮಹಾನಗರದ ಮುಂಬರುವ ಅಗತ್ಯಗಳನ್ನು ಗಮನದಟ್ಟುಕೊಂಡು ಎರಡನೇ ವಿಮಾನ ನಿಲ್ದಾಣ (second airport in benglauru) ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ನಿನ್ನೆ (ಜೂನ್ 20) ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಎಂ.ಬಿ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಇಂದು (ಜೂನ್ 21) ಟಿವಿ9 ಜೊತೆ ಮಾತನಾಡಿರುವ ಎಂಬಿ ಪಾಟೀಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನಮವೂ ಒಪ್ಪಂದ ಇದೆ. ಆ ಒಪ್ಪಂದದ ಪ್ರಕಾರ 2033ರವರೆಗೆ ಬೇರೊಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಅವಕಾಶ ಇಲ್ಲ. 2033ಕ್ಕೆ ಆ ಒಪ್ಪಂದ ಮುಗಿಯುತ್ತೆ. ಆಗ ನಾವು ಎರಡನೇ ಏರ್ಪೋರ್ಟ್ ಮಾಡಬೇಕಾಗುತ್ತೆ ಎಂದರು.
ಅಷ್ಟರಲ್ಲಿ ಒಪ್ಪಂದ ಹೋಗುತ್ತೆ eಂದು ಎರಡನೇ ಏರ್ಪೋರ್ಟ್ ಮಾಡುತ್ತಿಲ್ಲ.ಪ್ರಯಾಣಿಕರ ಲೋಡ್ ಬಗ್ಗೆ ನಿನ್ನೆ (ಜೂನ್ 20) ಪರಾಮರ್ಶೆ ಮಾಡಿದ್ದೇವೆ. 2032ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನಸಂದಣಿ ಆಗಿಬಿಡುತ್ತೆ. ಮತ್ತೊಂದು ಏರ್ಪೋರ್ಟ್ ನ ಅವಶ್ಯಕತೆ ನಮಗೆ ಬೇಕಾಗುತ್ತೆ. ಸದ್ಯ ಮುಂಬೈ, ಗೋವಾ, ದೆಹಲಿಯಲ್ಲೂ ಹೊಸ ವಿಮಾನ ನಿಲ್ದಾಣ ಓಪನ್ ಆಯ್ತು. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನ್ಯೂಯಾರ್ಕ್, ಲಂಡನ್ ದೇಶಗಳಲ್ಲೂ ಎರಡೆರೆಡೆ ವಿಮಾನ ನಿಲ್ದಾಣಗಳಿವೆ. ಪ್ರಾಥಮಿಕವಾಗಿ ನಿನ್ನೆ ಚರ್ಚೆ ಮಾಡಿದ್ದೀವಿ ಅಷ್ಟೆ. ಎಲ್ಲಿ, ಎಷ್ಟು ಎಕರೆ ಜಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿಲ್ಲ. ಕೆಲವು ಮಾನದಂಡ ಬೇಕಾಗುತ್ತೆ, ಅದನ್ನ ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ. ಚರ್ಚೆ ಮಾಡಿ ನಂತರ ಜಾಗದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದೊಂದಿಗೆ ಬಿಐಎಎಲ್ ಒಪ್ಪಂದ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ನಿರ್ಮಿಸುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್) ಮುಂದಿನ 25 ವರ್ಷಗಳವರೆಗೆ (2033ರವರೆಗೆ) 150 ಕಿಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದಿಲ್ಲ ಎಂದು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಷರತ್ತು ಮುಗಿಯಲು ಇನ್ನೂ ಒಂಬತ್ತು. ವರ್ಷಗಳಿದ್ದು, ಈಗಿನಿಂದಲೇ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಚಿಂತನೆಗಳು ನಡೆದಿವೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. 2023-24ನೇ ಸಾಲಿನಲ್ಲಿ 3.75 ಕೋಟಿ ಪ್ರಯಾಣಿಕರು ಕೆಬಿಎ ಮೂಲಕ ಪ್ರಯಾಣಿಸಿದ್ದಾರೆ. ಅಲ್ಲದೆ, 4 ಲಕ್ಷ ಟನ್ ಗೂ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ. ಈ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಲಿದ್ದು, ಅದನ್ನು ಗಮನದಲ್ಲಿಟ್ಟುಗೊಂಡ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ