ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಧಾನಪರಿಷತ್ನ 25 ನೂತನ ಸದಸ್ಯರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನೆರವೇರಿದೆ. ಈ ಸಂಬಂಧ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ಎಷ್ಟು ಜನರು ಸೇರಿದ್ದಾರೆ, ನಿಯಂತ್ರಿಸಿದ್ದಾರಾ? ಇಲ್ಲಿ ಕೊವಿಡ್ ಇಲ್ಲವಾ?, ಗೃಹ ಸಚಿವರು ಏನು ಮಾಡುತ್ತಿದ್ದಾರೆ. ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದು ಹೇಗೆ? ಸರ್ಕಾರದವರು ನಮ್ಮನ್ನೇನು ಹೆದರಿಸುತ್ತಿದ್ದಾರಾ? ನನ್ನನ್ನ ಬಂಧಿಸಲಿ, ಸಿದ್ದರಾಮಯ್ಯರನ್ನೂ ಬಂಧಿಸಲಿ. ನಾವು ನೀರಿಗಾಗಿ ಪಾದಯಾತ್ರೆಯನ್ನು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತದೆ, ಹೆದರಿಕೆ ಎಲ್ಲ ಊರಲ್ಲಿಟ್ಟುಕೊಳ್ಳಿ. ನಮ್ಮ ಪಾದಯಾತ್ರೆ ನಿಲ್ಲಿಸಲು ಇನ್ನೊಂದು ಜನ್ಮ ಎತ್ತಿಬರಬೇಕು. ಯಾರು ಬೇಕಾದ್ರೂ ನಮ್ಮನ್ನ ಬಂಧಿಸಲಿ. ನನ್ನನ್ನ ಬಂಧಿಸಲಿ, ಸಿದ್ದರಾಮಯ್ಯರನ್ನ, ಶಾಸಕರನ್ನ ಬಂಧಿಸಲಿ. ಕೊವಿಡ್ ರೂಲ್ಸ್‌ಗೆ ನಾವು ಗೌರವ ಕೊಡುತ್ತಿದ್ದೇವೆ. MLCಗಳ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ರೂಲ್ಸ್ ಬ್ರೇಕ್ ಆಗಿದೆ. ಗೃಹ ಸಚಿವರು ಏನು ಮಾಡ್ತಿದ್ದಾರೆ, ಇವರ ಮೇಲೆ ಕೇಸ್ ಹಾಕಿದ್ರಾ? ನಮ್ಮನ್ನ ಹೆದರಿಸುತ್ತಿದ್ದಾರಾ? ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.
ಶಾಸಕ, ಸಚಿವರಿಂದಲೇ ಕೊರೊನಾ ನಿಯಮ ಉಲ್ಲಂಘನೆ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಷತ್‌ನ 25 ನೂತನ ಸದಸ್ಯರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನೆರವೇರಿದೆ. ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪರಿಷತ್ ಸದಸ್ಯರ 500ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ. ಆದ್ರೆ ಸರ್ಕಾರಿ ಕಾರ್ಯಕ್ರಮದಲ್ಲೇ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ.
ರಾಜ್ಯದಲ್ಲಿ ಕೊರೊನಾ ತಡೆಗೆ ರಾಜ್ಯ ಸರ್ಕಾರ ಹಲವು ನಿರ್ಬಂಧನೆಗಳನ್ನು ಹೇರಿದೆ. ಆದ್ರೆ ಈ ನಿಯಮಗಳು ವಿಧಾನಸೌಧದಲ್ಲಿ ಶಾಸಕರಿಗೆ ಮಾತ್ರ ಇಲ್ಲವಾ? ಎಂಬ ಪ್ರಶ್ನೆ ಎದುರಾಗಿದೆ. ಬೆಂಬಲಿಗರ ದಂಡು ಕಟ್ಟಿಕೊಂಡು ಕೆಲ ಶಾಸಕರು ವಿಧಾನಸೌಧಕ್ಕೆ ಬಂದಿದ್ದಾರೆ. ಕಂದಾಯ ಸಚಿವರ ಕೊಠಡಿಯಲ್ಲಿ ಜನರ ಗುಂಪೇ ಸೇರಿಕೊಂಡಿದೆ. ಸಚಿವ ಅಶೋಕ್ ಭೇಟಿಗೆ ಶಾಸಕ ಅಜಯ್ ಸಿಂಗ್ 50ಕ್ಕೂ ಹೆಚ್ಚು ಜನರ ಜತೆ ಆಗಮಿಸಿದ್ದಾರೆ.
ಸಭೆ, ಸಮಾರಂಭಗಳಿಗೆ ಒಳಾಂಗಣದಲ್ಲಿ 100 ರಷ್ಟು ಮಾತ್ರ ಜನರ ಮಿತಿಯನ್ನು ಸರ್ಕಾರ ವಿಧಿಸಿದೆ. ಆದ್ರೆ ವಿಧಾನಸೌಧದಲ್ಲಿ ಇಂದು ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ವಿಧಾನಸೌಧ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯ, ಸಾಮಾನ್ಯ ಜನರ ಭೇಟಿ ನಿರ್ಬಂಧ, ವಿಧಾನಸೌಧದ ಕಾರಿಡಾರ್ಗಳಲ್ಲಿ ಗುಂಪು ಸೇರದಂತೆ ಸಿಎಂ ಈ ಹಿಂದೆ ಆದೇಶ ಹೊರಡಿಸಿದ್ದರು. ಆದ್ರೆ ಇಂದು ಈ ಎಲ್ಲಾ ನಿಯಮಗಳ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ITR Filing: ತಡವಾಗಿ ಐಟಿಆರ್ ಫೈಲಿಂಗ್ ಮಾಡಿದರೂ ಈ ವರ್ಗದವರು ದಂಡ ಕಟ್ಟಬೇಕಾಗದಿರಬಹುದು
Published On - 12:50 pm, Thu, 6 January 22