ಬಿಬಿಎಂಪಿಯಲ್ಲಿ ಅಗ್ನಿ ಅವಘಡ ಬಗ್ಗೆ ಡಿಸಿಎಂ ಮಿಡ್ ನೈಟ್ ಮೀಟಿಂಗ್, 3 ಆಯಾಮಗಳಲ್ಲಿ ತನಿಖೆಗೆ ಸೂಚನೆ

| Updated By: ಆಯೇಷಾ ಬಾನು

Updated on: Aug 12, 2023 | 7:27 AM

ಬಿಬಿಎಂಪಿಯಲ್ಲಿ ಅಗ್ನಿ ಅವಘಡ ಘಟ‌‌ನೆ ಬಗ್ಗೆ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದರು. ದಿಡೀರನೆ ಕೆಮಿಕಲ್ ನಿಂದ ಅವಘಡಕ್ಕೆ ಕಾರಣವಾಗಿದ್ದು ಹೇಗೆ? ಪೊಲೀಸರಿಗೆ ದೂರು ದಾಖಲಿಸುವ ಕುರಿತು ತಡರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.

ಬಿಬಿಎಂಪಿಯಲ್ಲಿ ಅಗ್ನಿ ಅವಘಡ ಬಗ್ಗೆ ಡಿಸಿಎಂ ಮಿಡ್ ನೈಟ್ ಮೀಟಿಂಗ್, 3 ಆಯಾಮಗಳಲ್ಲಿ ತನಿಖೆಗೆ ಸೂಚನೆ
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಆ.12: ಬಿಬಿಎಂಪಿ(BBMP) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, 9 ಜನ ಬಿಬಿಎಂಪಿ ನೌಕರಿಗೆ ತೀವ್ರ ರೀತಿಯಲ್ಲಿ ಸುಟ್ಟ ಗಾಯಗಳಾಗಿವೆ. ಗಾಯಗೊಂಡವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ನಿನ್ನೆ ಆಸ್ಪತ್ರೆ ಭೇಟಿ ನೀಡಿದ್ದ ವೇಳೆ ಎಲ್ಲಾ 9 ಗಾಯಾಳುಗಳನ್ನು ಐಸಿಯುಗೆ(ICU) ಶಿಫ್ಟ್ ಮಾಡಲು ಸೂಚಿಸಿದ್ದರು. ಅದರಂತೆ ಎಮರ್ಜೆನ್ಸಿ ಕೇರ್ ಯುನಿಟ್‌ನ ಐಸಿಯುಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಸಂಬಂಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಕಿ ಅವಘಡ ಘಟನೆ ಸಂಬಂಧ ಹಲಸೂರುಗೇಟ್ ಪೊಲೀಸ್ ಠಾಣೆಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಕೆ.ಪ್ರಹ್ಲಾದ್ ದೂರು ದಾಖಲಿಸಿದ್ದಾರೆ. ಹಲಸೂರುಗೇಟ್ ಪೊಲೀಸ್​​​​​​ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338ರಡಿ ಎಫ್ಐಆರ್ ದಾಖಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಡಿಸಿಎಂ ಮಿಡ್ ನೈಟ್ ಮೀಟಿಂಗ್

ಬಿಬಿಎಂಪಿಯಲ್ಲಿ ಅಗ್ನಿ ಅವಘಡ ಘಟ‌‌ನೆ ಬಗ್ಗೆ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದರು. ದಿಡೀರನೆ ಕೆಮಿಕಲ್ ನಿಂದ ಅವಘಡಕ್ಕೆ ಕಾರಣವಾಗಿದ್ದು ಹೇಗೆ? ಪೊಲೀಸರಿಗೆ ದೂರು ದಾಖಲಿಸುವ ಕುರಿತು ತಡರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು. ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಸೇರಿದಂತೆ ಕೆಲ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಬಿಬಿಎಂಪಿ ಆವರಣದಲ್ಲಿ ಅಗ್ನಿ ದುರಂತದ ತನಿಖೆಗೆ ಸೂಚನೆ: ಸಿದ್ದರಾಮಯ್ಯ

ಇನ್ನು ಸಭೆಯಲ್ಲಿ ಡಿಸಿಎಂ ಡಿಕೆಶಿ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಬಿಬಿಎಂಪಿ ಕಡತಗಳ ಸಂರಕ್ಷಣೆ ಮುಖ್ಯವಾಗಿದೆ. ಬಿಬಿಎಂಪಿ ಆವರಣದಲ್ಲಿರುವ ಲ್ಯಾಬ್ ಸ್ಥಳಾಂತರದ ಬಗ್ಗೆ ಚರ್ಚೆ ಹಾಗೂ ಮತ್ತೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಗೆ ಡಿಸಿಎಂ ಸೂಚನೆ ನೀಡಿದ್ದಾರೆ.

ಘಟನೆ ಕುರಿತು 3 ಆಯಾಮಗಳಲ್ಲಿ ತನಿಖೆ ನಡೆಸಿ. ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ತಾಂತ್ರಿಕ ತಂಡಕ್ಕೆ ಸೂಚನೆ ನೀಡಿದರು. ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯಿಂದ ಮತ್ತೊಂದು ತನಿಖೆ ಹಾಗೂ ಘಟನೆ ಕುರಿತು ಇಂಧನ ಇಲಾಖೆ ಅಧಿಕಾರಿಗಳಿಂದಲೂ ತನಿಖೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಆರೋಗ್ಯ ನಮಗೆ ಮುಖ್ಯ. ಘಟನೆಯಲ್ಲಿ ಗಾಯಗೊಂಡ ಬಹುತೇಕರು ಯಂಗ್ ಆಫಿಸರ್ಸ್. ಇನ್ನೂ ಕೆಲವರಿಗೆ ಮದುವೆ ಕೂಡ ಆಗಿಲ್ಲ. ​​​​ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ. ಈಗಾಗಲೇ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ 2-3 ದಿನ ಐಸಿಯುನಲ್ಲಿ ಅಧಿಕಾರಿಗಳು, ಸಿಬ್ಬಂದಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದರು.

ಘಟನೆ ಹಿನ್ನೆಲೆ

ಬಿಬಿಎಂಪಿಯ ಟೆಕ್ನಿಕಲ್ ಲ್ಯಾಬ್​ನಲ್ಲಿ ಸಾಮಾನ್ಯವಾಗಿ ರಸ್ತೆ, ಕಟ್ಟಡ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆಯನ್ನ ಮಾಡಲಾಗುತ್ತೆ.‌ ಈ ಪರೀಕ್ಷೆಗೆ ಬೆಂಜಿಮಿನ್ ಕೆಮಿಕಲ್ ಸಹ ಬಳಸುತ್ತಾರೆ. ಈ‌ ಕೆಮಿಕಲ್ ನಿಂದಲೇ ಬೆಂಕಿ ಹತ್ತಿರುವ ಅಂದಾಜಿದೆ.‌ ಇನ್ನು ಬೆಂಕಿ ಕಾಣಿಸಿಕೊಂಡಂತಹ ವೇಳೆ ಹಲವು ಜನ ಬಿಬಿಎಂಪಿ ನೌಕರರು ಕೆಲಸ ನಿರ್ವಹಿಸುತ್ತಿದ್ರು. ಈ ವೇಳೆ 9 ಜನ ಬಿಬಿಎಂಪಿ ನೌಕರರಿಗೆ ತೀವ್ರವಾಗಿ ಬೆಂಕಿ ಹತ್ತಿಕೊಂಡಿದ್ದು, ಚರ್ಮವೆಲ್ಲವೂ ಸುಟ್ಟು ಹೋಗಿದೆ.‌ ಅದ್ರಲ್ಲಿ, ಚೀಫ್ ಎಂಜಿನಿಯರ್ ಶಿವಕುಮಾರ್ ಎನ್ನುವವರಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.‌ ಇನ್ನು ಎಕ್ಸಿಕ್ಯುಟಿವ್ ಎಂಜಿನಿಯರ್ ಗಳಾದ ಕಿರಣ್, ಸಂತೋಷ್, ವಿಜಯಮಾಲ ಅವರಿಗೂ ಹೆಚ್ಚು ಬೆಂಕಿ ಸುಟ್ಟಿದೆ. ಹಾಗೂ ಸೀರಾಜ್ ಮನೋಜ್, ಜ್ಯೋತಿ , ಶ್ರೀನಿವಾಸ್ ಎನ್ನುವವರಿಗೂ ಹೆಚ್ಚು ಬೆಂಕಿಯಿಂದ ಸುಟ್ಟ ಗಾಯಗಳಾಗಿದ್ದು, ಮೊದಲು ಇವರನ್ನ ನಗರದ ಸೆಂಟ್ ಮಾರ್ಥಾಸ್ ಹಾಸ್ಪೆಟ್​ಗೆ ದಾಖಲಿಸಲಾಯಿತು.‌ ಆದರೆ ಹೆಚ್ಚು ಬೆಂಕಿ ಸುಟ್ಟಿದ್ದರಿಂದ ಸೆಂಟ್ ಮಾರ್ಥಾಸ್ ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಇದೀಗಾ ಐಸಿಯುಗೆ ಶಿಫ್ಟ್​ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 7:26 am, Sat, 12 August 23