ಬೆಂಗಳೂರು, ಸೆಪ್ಟೆಂಬರ್ 28: ಕೇಂದ್ರ ಚುನಾವಣಾ ಆಯೋಗದ (ECI) ನಿರ್ದೇಶನದ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಕ್ಟೋಬರ್ 27 ರಂದು ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಬಿಬಿಎಂಪಿಯ ಬಹು ನಿರೀಕ್ಷಿತ ಚುನಾವಣೆಯ ತಯಾರಿಯಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 2024 ರ ಜನವರಿ 5 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಪ್ರಕಾರ, ಕೇಂದ್ರ ಚುನಾವಣಾ ಆಯೋಗದ ಸೆಪ್ಟೆಂಬರ್ 25 ರ ನಿರ್ದೇಶನಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ,
ಕರ್ನಾಟಕ ಹೈಕೋರ್ಟ್‌ನ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಸೆಪ್ಟೆಂಬರ್ 25 ರಂದು 225 ವಾರ್ಡ್‌ಗಳ ಅಂತಿಮ ವಿಂಗಡಣೆಯನ್ನು ಹೊರಡಿಸಿದೆ. ಸರಕಾರ ಸದ್ಯ ವಾರ್ಡ್ ಮೀಸಲು ನಿಗದಿಗೆ ಮುಂದಾಗಿದ್ದು, ಈ ವರ್ಷ ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಿಜೆಪಿ ಸರ್ಕಾರವು ಈ ಹಿಂದೆ ವಿಂಗಡಣೆ ಮಾಡಿದ 243 ವಾರ್ಡ್‌ಗಳಲ್ಲಿ ಲೋಪದೋಷಗಳಿವೆ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ ನಂತರ ಕರ್ನಾಟಕ ಹೈಕೋರ್ಟ್ ಜೂನ್‌ನಲ್ಲಿ ಸರ್ಕಾರಕ್ಕೆ ವಿಂಗಡಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 12 ವಾರಗಳ ಕಾಲಾವಕಾಶವನ್ನು ನೀಡಿತ್ತು.
ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ನಾಳಿನ ಕರ್ನಾಟಕ ಬಂದ್ ವೇಳೆ KSRTC, BMTC ಸಂಚಾರ: ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ
ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮಾಜಿ ಕಾರ್ಪೊರೇಟರ್‌ಗಳನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಸೆಪ್ಟೆಂಬರ್ 2020 ರಿಂದ ಬಿಬಿಎಂಪಿಯು ಚುನಾಯಿತ ಕೌನ್ಸಿಲ್ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಬಿಬಿಎಂಪಿಯನ್ನು ಪ್ರಸ್ತುತ ಸರ್ಕಾರ ನೇಮಿಸಿದ ಆಡಳಿತಾಧಿಕಾರಿ ಮತ್ತು ಅಧಿಕಾರಿಗಳು ಮುನ್ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ