ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲು ಮುಂದಾದ ಬಿಜೆಪಿಯ ಘಟಾನುಘಟಿ ನಾಯಕರು
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಸಹ ಆಪರೇಷನ್ ಹಸ್ತ ಜೋರಾಗಿ ನಡೆಸಿದೆ. ಮೈತ್ರಿಯಿಂದ ಅಸಮಾಧಾನಗೊಂಡಿರುವ ನಾಯಕರನ್ನು ಸೆಳೆಯಲು ಕಾಂಗ್ರೆಸ್ ತಂತ್ರರೂಪಿಸಿದೆ. ಈಗಾಗಲೇ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದು, ಇದೀಗ ಮತ್ತಷ್ಟು ನಾಯಕರು ಕಮಲ ಬಿಟ್ಟು ಕೈ ಹಿಡಿಯಲಿದ್ದಾರೆ. ಈ ಬಗ್ಗೆ ಜಗದೀಶ್ ಶೆಟ್ಟರ್ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 28): ಅತ್ತ ಜೆಡಿಎಸ್ ಬಿಜೆಪಿ ಮೈತ್ರಿಯೊಂದಿಗೆ (JDS Bjp alliance) ಲೋಕಸಭಾ ಚುನಾವಣೆಗೆ (Loksabha Elections 2024)ಸಿದ್ಧತೆ ನಡೆಸಿದ್ದರೆ, ಇತ್ತ ಕಾಂಗ್ರೆಸ್ (Congress) ಸಹ ಭರ್ಜರಿ ತಯಾರಿ ನಡೆಸಿದೆ. ಅದರಲ್ಲೂ ಮುಂದಿನ ಚುನಾವಣೆ ಸಲುವಾಗಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಆಪರೇಷನ್ ಹಸ್ತದ ಮೂಲಕ ಬಲೆ ಬೀಸಿದ್ದು, ಈಗಾಗಲೇ ಕೆಲ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಪ್ರಭಾವಿ ನಾಯಕರುಗಳು ಕಾಂಗ್ರೆಸ್ ಸೇರಲಿದ್ದಾರೆ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಸೆಪ್ಟೆಂಬರ್ 28) ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಹಲವು ತಿಂಗಳಿನಿಂದ ಹಲವು ಮಾಜಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಿನ್ನೆ ರಾಮಣ್ಣ ಲಮಾಣಿ ಮತ್ತು ಎಂ.ಪಿ. ಕುಮಾರಸ್ವಾಮಿ ಮತ್ತೆ ಸಂಪರ್ಕ ಮಾಡಿದಾಗ ಡಿಕೆ ಶಿವಕುಮಾರ್ ಬಳಿ ಕರೆದೊಯ್ದಿದ್ದೆ. ಮುಂದಿನ ವಾರ ಅವರನ್ನು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಬಿಜೆಪಿಯಲ್ಲಿ ಬೇಜಾರಾದವರು ಬಹಳಷ್ಟು ಜನ ಇದ್ದಾರೆ. ಲೀಡರ್ ಲೆಸ್ ಪಾರ್ಟಿ ಹೇಗಿರುತ್ತದೆ ಎಂಬುದಕ್ಕೆ ಈಗ ಬಿಜೆಪಿ ಉದಾಹರಣೆ ಮಾಜಿ ಶಾಸಕರು, ಜಿಲ್ಲಾ, ತಾಲೂಕು ಮುಖಂಡರು ಸಂಪರ್ಕ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ದೊಡ್ಡ ಟೀಮ್ ನಮ್ಮನ್ನು ಸಂಪರ್ಕ ಮಾಡುತ್ತಿದೆ. ಇನ್ನೂ ಹಲವು ಮಾಜಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ, ಶೂನ್ಯ ಪರಿಸ್ಥಿತಿ ಉಳಿದಿದೆ. ಬಿಜೆಪಿಯಲ್ಲಿ ನಾನು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನಾಗಿ ಎಷ್ಟೋ ಜನರನ್ನು ಬೆಳೆಸಿದ್ದರಿಂದ ನೇರವಾಗಿ ಅವರು ನನ್ನ ಸಂಪರ್ಕಕ್ಕೆ ಬರುತ್ತಿದ್ದಾರೆ. ನನ್ನ ನಾಯಕತ್ವದಲ್ಲಿ ಇರುತ್ತೇವೆ ಎಂದು ಸ್ವ ಇಚ್ಛೆಯಿಂದ ಬರುತ್ತಿದ್ದಾರೆ. ಬಿಟ್ಟು ಬನ್ನಿ ಎಂದು ನಾನು ಯಾರಿಗೂ ಒತ್ತಾಯಿಸಲು ಹೋಗಿಲ್ಲ. ಅವರಾಗಿಯೇ. ಬರುತ್ತಿರುವವರನ್ನು ಮಾತ್ರ ಸೇರ್ಪಡೆ ಮಾಡಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತ, ನಾಯಕನಾಗಿ ಪಕ್ಷ ಬಲವರ್ಧನೆಯ ಪ್ರಯತ್ನ ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ ಇದ್ದಾಗ ಅನಂತಕುಮಾರ್, ಯಡಿಯೂರಪ್ಪ ನನಗೇ ಜವಾಬ್ದಾರಿ ಕೊಡುತ್ತಿದ್ದರು. ಬಿಜೆಪಿಯಲ್ಲಿ ನಾನೇ ಡಾಮಿನೇಟ್ ಮಾಡಲು ಹೋಗಲಿಲ್ಲ. ಯಾರ್ಯಾರು ನಾಯಕರು ಇದ್ದರೋ ಅವರನ್ನು ಒಪ್ಪಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ನಲ್ಲಿ ಸಂಪರ್ಕ ಮಾಡಿದವರನ್ನು ಸೇರಿಸುವ ಪ್ರಯತ್ನ ಆಗಿದೆಯೇ ಹೊರತು ನನ್ನ ಸ್ವ ಹಿತಾಸಕ್ತಿ ಇಲ್ಲ. ಕಾಂಗ್ರೆಸ್ ನಲ್ಲಿ ಸೇರ್ಪಡೆ ಮಾಡಿಸಿ ಎಂದು ಯಾವುದೇ ಜವಾಬ್ದಾರಿ ಕೊಟ್ಟಿಲ್ಲ ನನ್ನ ಸಂಪರ್ಕ ಮಾಡಿದವರನ್ನು ಪಕ್ಷದ ಅಧ್ಯಕ್ಷರ, ಹೈಕಮಾಂಡ್ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿದ ಶೆಟ್ಟರ್, ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಪ್ಲಸ್ ಮೈನಸ್ ಏನೂ ಇಲ್ಲ. ಮೈತ್ರಿಯಿಂದ ಜೆಡಿಎಸ್ ಗೆ ಲಾಭವೇ ಹೊರತು ಬಿಜೆಪಿಗೆ ಲಾಭ ಸಾಧ್ಯವೇ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ದುರ್ಬಲವಾಗಿದೆ. ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಡಾಮಿನೇಟ್ ಮಾಡುತ್ತದೆ. ಮೈತ್ರಿಯಿಂದ ಬಿಜೆಪಿ ಮತ್ತಷ್ಟು ದುರ್ಬಲ ಆಗುತ್ತದೆ. ರಾಜ್ಯ ಬಿಜೆಪಿ ನಾಯಕರನ್ನು ಎಷ್ಟು ಸೈಡ್ ಲೈನ್ ಮಾಡಿದ್ದಾರೆ ಎಂಬುದಕ್ಕೆ ಮೊನ್ನೆಯ ದೆಹಲಿಯ ಸಭೆಯೇ ಸಾಕ್ಷಿ . ಜೆಡಿಎಸ್ ಎ ಟೀಮ್ ಆಗಿದೆ. ಬಿಜೆಪಿ ಜೆಡಿಎಸ್ ನ ಬಿ ಟೀಮ್ ಆಗಿದೆ. ಪ್ರತಾಪ್ ಸಿಂಹ ದೇವೇಗೌಡರ ಕಾಲಿಗೆ ಬಿದ್ದಿದ್ದು ಬಿಜೆಪಿಯ ಈಗಿನ ಪರಿಸ್ಥಿತಿ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ