
ಬೆಂಗಳೂರು, ಅಕ್ಟೋಬರ್ 22: ಕರ್ನಾಟಕದಲ್ಲಿ ತೀವ್ರ ಬರಗಾಲ ಹಿನ್ನಲೆ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಡಾ.ಪರಮೇಶ್ವರ್ ಮತ್ತೊಮ್ಮೆ ಪತ್ರ ಬರೆದಿದ್ದು, ಬರ ಪರಿಹಾರಕ್ಕಾಗಿ 20,585.73 ಕೋಟಿ ರೂ. ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ತೀವ್ರ ಬರದಿಂದ 62,481.88 ಕೋಟಿ ರೂ. ಕೃಷಿ ನಷ್ಟ ಸಂಭವಿಸಿದ್ದು, 226 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಶೀಘ್ರ ಆರ್ಥಿಕ ನೆರವು ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.35ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು ಕೇವಲ 551 ಮಿ.ಮೀ. ಮಳೆಯಾಗಿದೆ. ಇದು 1956ರಿಂದೀಚೆಗೆ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರಿಂದೀಚೆಗೆ ದಾಖಲಾದ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ. ರಾಜ್ಯ ಸರ್ಕಾರವು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕಹಾಕಲಾದ ಒಟ್ಟು ಆರ್ಥಿಕ ನಷ್ಟ 62,481.88 ಕೋಟಿ ರೂ.ಗಳಾಗಿವೆ
ಇದನ್ನೂ ಓದಿ: ಸಿಎಂ ಡಿಕೆಶಿ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್: ಇಲ್ಲಿದೆ ಮಾಹಿತಿ
ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಒಟ್ಟು 20,585.73 ಕೋಟಿ ರೂ. ಕೇಂದ್ರದ ನೆರವು ಕೋರಿ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿದೆ. ಇದರಲ್ಲಿ ಬೆಳೆ ಹಾನಿಯ ಪರಿಹಾರ ಸಹಾಯಧನಕ್ಕಾಗಿ 6,128.70 ಕೋಟಿ ರೂ., 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ 12,146.99 ಕೋಟಿ ರೂ., ಕುಡಿಯುವ ನೀರಿನ ಪೂರೈಕೆಗಾಗಿ 1,727 ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ 583.04 ಕೋಟಿ ರೂ. ಒಳಗೊಂಡಿದೆ.
ಬರದಿಂದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಕ್ಷಣವೇ ಆರ್ಥಿಕ ನೆರವು ಒದಗಿಸುವ ಅಗತ್ಯವಿದೆ. ರೈತರಿಗೆ ದಿನಕ್ಕೆ 327ರಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರವನ್ನು ಲೆಕ್ಕಹಾಕಲಾಗಿದೆ. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಸಹ ಕೇಂದ್ರದ ನೆರವು ಬೇಕಾಗಿದೆ. ಬೆಳೆ ಹಾನಿಯ ಪರಿಹಾರ ಸಹಾಯಧನವನ್ನು ನಿರ್ಧರಿಸಲು ಈಗಲೂ 2015–16ರ ಹಳೆಯ ಕೃಷಿ ಗಣತಿಯ ದತ್ತಾಂಶವನ್ನು ಆಧರಿಸಿ ಪರಿಹಾರ ಲೆಕ್ಕಹಾಕುವುದರಿಂದ ರಾಜ್ಯಕ್ಕೆ ಸುಮಾರು 1,669.50 ಕೋಟಿ ರೂ. ನೆರವಿನ ಕೊರತೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ಫಲಾನುಭವಿ ರೈತರನ್ನು ನಿಖರವಾಗಿ ಗುರುತಿಸಲು ಹಾಗೂ ಪರಿಹಾರದ ಅಗತ್ಯವನ್ನು ಸಮರ್ಪಕವಾಗಿ ಅಂದಾಜಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ ದತ್ತಾಂಶವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಪರಮೇಶ್ವರ್ ಆಗ್ರಹಿಸಿದ್ದಾರೆ.
ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ 427.20 ಕೋಟಿ ರೂ. ನೆರವು ಬೇಕಾಗಿದೆ. ಅದೇ ರೀತಿ, ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ 70.96 ಕೋಟಿ ರೂ. ನೆರವು ಒದಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ 16ನೇ ಹಣಕಾಸು ಆಯೋಗದ ಅವಧಿಯನ್ನು ಪರಿಗಣಿಸಿ, ಪ್ರಸ್ತುತ ಜಾರಿಯಲ್ಲಿರುವ ಬೆಳೆ ಹಾನಿಯ ಪರಿಹಾರ ಸಹಾಯಧನದ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವೂ ಇದೆ. ಕೇಂದ್ರ ಅಂತರ ಸಚಿವಾಲಯಗಳ ಅಧ್ಯಯನ ತಂಡವು (IMCT) ಅಕ್ಟೋಬರ್ 3ರಿಂದ 6ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ರಾಜ್ಯ ಸರ್ಕಾರ ಸಲ್ಲಿಸಿರುವ ಸಮಗ್ರ ಬರ ಪರಿಹಾರ ಮನವಿ ಪತ್ರದ ಪರಿಶೀಲನೆಯನ್ನು ತ್ವರಿತಗೊಳಿಸಬೇಕೆಂದು ಡಿಸಿಎಂ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.