ಬೆಂಗಳೂರು: ನಗರದ ದಕ್ಷಿಣ ವಿಭಾಗದಲ್ಲಿ ಕಳ್ಳತನ ಮಾಡಿ ಹಾವಳಿ ಮಾಡಿದ್ದ ಆಸಾಮಿ ಬಂಧಿಸಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸರಿಂದ ಆರೋಪಿ ಬಂಧನ ಮಾಡಲಾಗಿದೆ. ಕಾರ್ತಿಕ್ ಬಂಧಿತ ಆರೋಪಿ ಆಗಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ಕಾರ್ತಿಕ್ ಆರೋಪಿ ಎಂಬಾತನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಕೋಣನಕುಂಟೆ, ಜೆಪಿ ನಗರ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆಸಾಮಿ ಬಂಧಿಸಲಾಗಿದೆ.
ಆರೋಪಿಗಳು ನಂದಿನಿ ಪಾರ್ಲರ್, ಹೋಟೆಲ್ ಗಳಲ್ಲಿ ಕಳ್ಳತನ ಮಾಡಿದ್ದರು. ಕದ್ದ ಬೈಕ್ ನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗ್ತಿದ್ದರು. ಕುಡಿತದ ಚಟಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದರು. ಕುಡಿಯಲು ಹಣ ಮಾಡಲು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಫೆಬ್ರವರಿ 8 ರಂದು ಜೆ.ಪಿ. ನಗರ ನೈವೇದ್ಯಂ ಹೋಟೆಲ್ ನಲ್ಲಿ ಕಳ್ಳತನ ಮಾಡಿದ್ದರು. ರಾತ್ರಿ ಹೊತ್ತು ಬಂದು 75 ಸಾವಿರ ಹಣ ದೋಚಿದ್ದರು. ಬಂಧಿತರಿಂದ 20 ಸಾವಿರ ನಗದು ಹಾಗೂ ಬೆಳ್ಳಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕೂಡ ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಕಾರ್ತಿಕ್ ಇದೀಗ ಮತ್ತೆ ಬಂಧನವಾಗಿದೆ.
ನಾಗಾಲ್ಯಾಂಡ್: ಸುಮಾರು 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ
ಸುಮಾರು 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ ಘಟನೆ ನಾಗಾಲ್ಯಾಂಡ್ನ ದಿಮಾಪುರ ಎಂಬಲ್ಲಿ ನಡೆದಿದೆ. 5 ಕೋಟಿ ಮೌಲ್ಯದ ಯಾಬಾ ಮಾತ್ರೆಯನ್ನು ಜಪ್ತಿ ಮಾಡಲಾಗಿದೆ. ನಾಗಾಲ್ಯಾಂಡ್ನ ದಿಮಾಪುರ ಪೊಲೀಸರ ಕಾರ್ಯಾಚರಣೆಯಲ್ಲಿ ಬೃಹತ್ ಮೊತ್ತದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.
ಇತರ ಅಪರಾಧ, ಅಪಘಾತ ಸುದ್ದಿಗಳು
ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಪ್ರಶಾಂತ್ (22), ಅಥಣಿ ಮೂಲದ ಶ್ರದ್ಧಾ ತೆಲಸಂಗಮಠ (20) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯನಗರ: ಸಾಲದ ಸುಳಿಗೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗರಗದ ನಾಗರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ನಾಗರಾಜ, ಸಾಲಕ್ಕೆ ಸೋತು ಸಾವಿಗೆ ಶರಣಾಗಿದ್ದಾರೆ. ಕೂಟ್ಟೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಳ್ಳಾರಿ: ಕೆರೆ ನೋಡಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದ ಯುವತಿ ರಕ್ಷಣೆ ಮಾಡಲು ಹೋಗಿ ಯುವಕ ನೀರುಪಾಲು ಆದ ದುರ್ಘಟನೆ ನಡೆದಿದೆ. ಸಂಡೂರು ತಾಲೂಕಿನ ಹೊಸದರೋಜಿ ಕೆರೆಯಲ್ಲಿ ಮುಳುಗಿ ಬಿಬಿಎ ವಿದ್ಯಾರ್ಥಿ ಸಂದೀಪ್ ಸಾವನ್ನಪ್ಪಿದ್ದಾರೆ. ಯುವತಿಯನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುರ್ಡೇಶ್ವರ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ಶಿವಮೊಗ್ಗ ಮೂಲದ ಪ್ರವಾಸಿಗರಾದ ಮಾರುತಿ, ಸಾಗರದ ಅನಿಲ್ ಕುಮಾರ್, ರಾಮನಗರದ ಪುರುಷೋತ್ತಮ್ನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.
ಬೆಳಗಾವಿ: ಜಲಾಶಯದಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಸಂಭವಿಸಿದೆ. ಇಲ್ಲಿನ ಹಿಡಕಲ್ ಜಲಾಶಯದಲ್ಲಿ ಮುಳುಗಿ ವಿದ್ಯಾರ್ಥಿ ನೀರುಪಾಲಾಗಿದ್ದಾರೆ. ಯಮಕನಮರಡಿಯ ಜಿಹಾದ್ ಶರೀಫ್ (20) ದುರ್ಮರಣವನ್ನಪ್ಪಿದ್ದಾರೆ. ಫ್ರೆಂಡ್ಸ್ ಜೊತೆ ಫೋಟೋಶೂಟ್ ಮಾಡಲು ಬಂದಿದ್ದ ವಿದ್ಯಾರ್ಥಿ ನೀರುಪಾಲಾಗಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ
Published On - 11:35 pm, Wed, 16 February 22