ಬೆಂಗಳೂರು: ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಜನರ ಓಡಾಟದ ನಡುವೆಯೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾಗರಬಾವಿಯ ಪಾಪರೆಡ್ಡಿಪಾಳ್ಯ ಸರ್ಕಲ್ ಬಳಿ ರಾಮನಗರ ಜಿಲ್ಲೆ ಚನ್ನಪಟ್ಟಣ ಮೂಲದ ಮಾದೇವ(40) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 11 ಗಂಟೆ ವೇಳೆ ನೇಣಿಗೆ ಶರಣಾಗಿದ್ದಾರೆ.
15 ವರ್ಷದ ಹಿಂದೆ ಯಶೋಧಮ್ಮ ಎಂಬಾಕೆ ಜೊತೆ ವಿವಾಹವಾಗಿದ್ದ ಮಾದೇವ, ಪ್ರತಿ ದಿನ ಕುಡಿದು ಕಿರಿಕ್ ಮಾಡುತ್ತಿದ್ದ. ಗಂಡನ ಕುಡಿತದ ಗಲಾಟೆಗೆ ಹಲವು ಬಾರಿ ಯಶೋಧಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ(ಫೆ.26) ಬೆಳಗ್ಗೆ ಯಶೋಧಮ್ಮ tನ್ನ ಗಂಡನಿಗೆ 150 ರೂಪಾಯಿ ನೀಡಿದ್ದಾರೆ. ಆದ್ರೆ ಮಾದೇವ ಹೆಂಡತಿ ನೀಡಿದ್ದ ಹಣಕ್ಕೆ ಕಂಠ ಪೂರ್ತಿ ಕುಡಿದು ಸಂಜೆ ಮತ್ತೆ ಪತ್ನಿ ಜೊತೆ ಜಗಳವಾಡಿದ್ದಾರೆ. ಹೀಗಾಗಿ ಯಶೋಧಮ್ಮ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಮನೆ ಬಳಿ ಬಂದ ಪೊಲೀಸರು ಮಾದೇವನಿಗೆ ಬುದ್ದಿ ಹೇಳಿ ತೆರಳಿದ್ದಾರೆ. ಇದಾದ ಬಳಿಕ ಮನೆಯಿಂದ ತೆರಳಿದ ಮಾದೇವ ಸಾರ್ವಜನಿಕ ಸ್ಥಳದಲ್ಲೇ ಜನ ಓಡಾಡುತ್ತಿರುವುದನ್ನೂ ಲೆಕ್ಕಿಸದೆ ನೇರವಾಗಿ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಾಮನಗರ: ಅಪರಿಚಿತ ಯುವಕನ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ
ತಾನು ಧರಿಸಿದ್ದ ಪಂಚೆಯಿಂದಲೇ ನೇಣಿಗೆ ಶರಣಾಗಿದ್ದಾರೆ. ನಂತರ ಶವವನ್ನ ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಹಿಂದೆ ಎರಡು ಮದುವೆಯಾಗಿದ್ದ ಮಾದೇವ, ಬಳಿಕ ಯಶೋಧಮ್ಮ ಜೊತೆ ವಿವಾಹವಾಗಿದ್ರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಊರಿನಲ್ಲಿ ಓದಿಕೊಂಡಿದ್ದಾರೆ. ಹೋಟೆಲ್ ಕೆಲಸ ಮಾಡಿಕೊಂಡು ಯಶೋಧಮ್ಮ ತನ್ನ ಗಂಡನನ್ನು ಸಾಕುತ್ತಿದ್ದಳು. ಸ್ಥಳಕ್ಕೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಆಗಮಿಸಿದ್ದು ಶವವನ್ನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ