ಬೆಂಗಳೂರು: ಬಿಬಿಎಂಪಿ ಚುನಾವಣೆ(BBMP Election) ಮುಂದೂಡಲು ಬಯಸಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್(Supreme Court) ಬಿಗ್ ರಿಲೀಫ್ ನೀಡಿದೆ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಒದಗಿಸಲು ಮಾರ್ಚ್ 31 ರೊಳಗೆ ಕಾಲಾವಕಾಶ ನೀಡಿದೆ. ಇದರಿಂದ ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. 2023 ರ ವಿಧಾನಸಭೆ ಚುನಾವಣೆ(Karnataka Assembly Elections 2023) ಬಳಿಕವೇ ಬಿಬಿಎಂಪಿ ಚುನಾವಣೆ ನಡೆಯುವುದು ಖಚಿತವಾಗಿದೆ. ಏಕೆಂದರೆ ಬಿಬಿಎಂಪಿಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ನೀಡಿ ಚುನಾವಣೆ ನಡೆಸಲು ಕಾಲಾವಕಾಶ ಬೇಕಿರುವುದರಿಂದ ವಿಧಾನಸಭೆ ಚುನಾವಣೆ ಬಳಿಕವೇ ಬಿಬಿಎಂಪಿಗೆ ಚುನಾವಣೆ ನಡೆಯುವುದು ಖಚಿತವಾದಂತಾಗಿದೆ.
ಬಿಬಿಎಂಪಿ ಅವಧಿ ಮುಗಿದು 2 ವರ್ಷ ಕಳೆದರೂ ಚುನಾವಣೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಸುಪ್ರೀಂಕೋರ್ಟ್ ಈ ಹಿಂದೆ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದರೂ, ಬಿಬಿಎಂಪಿ ಮೀಸಲಾತಿಯಲ್ಲಿನ ಲೋಪದೋಷಗಳಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನವೆಂಬರ್ 30 ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ಡಿಸೆಂಬರ್ 31 ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಆಧರಿಸಿ ಸರ್ಕಾರ ಮೀಸಲಾತಿ ನಿಗದಿಪಡಿಸಲು ಆಯೋಗ ರಚಿಸಿತ್ತು.
ಇದನ್ನೂ ಓದಿ: ಕೊಪ್ಪಳ: ರಾಜ್ಯ ಬಿಜೆಪಿ ನಾಯಕರೊಂದಿಗೆ ಬಿಎಸ್ ಯಡಿಯೂರಪ್ಪ ಮುನಿಸಿಕೊಂಡಿರುವುದು ಸಾರ್ವಜನಿಕವಾಗುತ್ತಿದೆ!
ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಬಿಬಿಎಂಪಿಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ವರದಿ ನೀಡಲು ಕಾಲಾವಕಾಶ ಕೋರಿತ್ತು. ಇದರಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗುವುದನ್ನು ಅರಿತಿದ್ದ ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ತಕ್ಷಣ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಮನವಿ ಮಾಡಿತ್ತು. ಆದರೆ ಹಿಂದುಳಿತ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡದೇ ಚುನಾವಣೆ ನಡೆಸುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿಯವರಿದ್ದ ಪೀಠ ಮಾರ್ಚ್ 31 ರೊಳಗೆ ಮೀಸಲಾತಿ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಆಯೋಗಕ್ಕೆ ಸೂಚಿಸಿದೆ. ಆದರೆ ಅಷ್ಟರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಚ್ 31 ರೊಳಗೆ ಆಯೋಗ ವರದಿ ನೀಡಿದರೂ ಅದನ್ನು ಆಧರಿಸಿ ಮೀಸಲಾತಿ ನಿಗದಿ ಪಡಿಸಿ ಚುನಾವಣೆ ನಡೆಸುವುದು ಅಸಾಧ್ಯವಾಗಲಿದೆ. ಹೀಗಾಗಿ ವಿಧಾನಸಭೆ ಚುನಾವಣೆ ನಂತರ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾದಂತಾಗಿದೆ. ಹೀಗಾಗಿ ಬಿಬಿಎಂಪಿ ಕಾರ್ಪೊರೇಟರ್ ಆಗುವ ಕನಸು ಹೊತ್ತಿದ್ದವರಿಗೆ ನಿರಾಸೆಯಾದರೆ, ಬಿಬಿಎಂಪಿ ಚುನಾವಣೆ ಮುಂದೂಡಿಕೆ ಬಯಸಿದ್ದ ಆಡಳಿತ ಪಕ್ಷ ಹಾಗೂ ವಿರೋಧಪಕ್ಷಗಳಿಗೆ ಸುಪ್ರೀಂಕೋರ್ಟ್ ಆದೇಶ ನೆಮ್ಮದಿ ತಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:45 pm, Thu, 15 December 22