ಬೆಂಗಳೂರು: ಮಹಾನಗರದಲ್ಲಿ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದ್ದು, ಯುವ ಕಾಂಗ್ರೆಸ್ (Youth Congress) ನಾಯಕ ಮೊಹಮ್ಮದ್ ನಲಪಾಡ್ (Mohammad Nalapad) ಮಾಲಿಕತ್ವದ, ನಲಪಾಡ್ ಅಕಾಡೆಮಿ ಆವರಣದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಒತ್ತುವರಿ ತೆರವಿಗೆ ಶಾಸಕ ಹ್ಯಾರಿಸ್ ಪಿಎ ರಮೇಶ್ ಅಡ್ಡಿ ಮಾಡಿದ್ದಾರೆ.
ಅಕಾಡೆಮಿ ಬಳಿ ಅಕಾಡೆಮಿ ಬಳಿ ಉಳಿದ ಒತ್ತುವರಿ ತೆರವು ನಾವೇ ಮಾಡುತ್ತೇವೆ. ಈಗ ಎಷ್ಟು ತೆರವು ಮಾಡಿದ್ದೀರೋ ಅಷ್ಟು ಮಾತ್ರ ಮಾಡಿ. ರಸ್ತೆ ಕಟಿಂಗ್ ಕೂಡಾ ನಾವೇ ಮಾಡುತ್ತೇವೆ ಎಂದು ಬಿಬಿಎಂಪಿ ಸಿಬ್ಬಂದಿಗೆ ಹೇಳಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ: ಯಲಹಂಕದಲ್ಲಿ ಘರ್ಜಿಸಿದ ಬಿಬಿಎಂಪಿ ಜೆಸಿಬಿ
ನಗರದಲ್ಲಿ ಇಂದೂ ಸಹ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಮಹದೇವಪುರ, ಯಲಹಂಕ , ಪಾಪಯ್ಯರೆಡ್ಡಿ ಬಡಾವಣೆ, ಶಾಂತಿನಿಕೇತನ ಲೇಔಟ್ನಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿರುವ ಕಟ್ಟಡಗಳನ್ನು ಬಿಬಿಎಂಪಿ ಜೆಸಿಬಿಗಳು ತೆರವುಗೊಳಿಸಿವೆ. ತುಸುವೇ ಮಳೆ ಬಂದರೂ ಯಲಹಂಕದ ಅಂಡರ್ ಪಾಸ್ ಜಲಾವೃತವಾಗುವುದು ಮತ್ತು ಅಲ್ಲಾಳಸಂದ್ರದ ಸಮೀಪ ರಸ್ತೆಯ ಮೇಲೆ ನೀರು ಹರಿಯುವುದು ಸಾಮಾನ್ಯ ಸಂಗತಿ ಎನಿಸಿತ್ತು. ಕೆರೆಗಳು ಹಾಗೂ ಮಳೆ ನೀರು ಹರಿಸುವ ರಾಜಕಾಲುವೆಗಳ ಒತ್ತುವರಿಯೇ ಇದಕ್ಕೆ ಕಾರಣ ಎಂದು ಜನರು ದೂರಿದ್ದರು. ಬಿಬಿಎಂಪಿಯ ಯಲಹಂಕ ವಲಯದ ಎಂಜಿನಿಯರ್ಗಳು ಸಹ ಮಳೆಯಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದರು.
ಬೆಂಗಳೂರಿನ ಉತ್ತರಕ್ಕಿರುವ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಕೃಷಿ ಭೂಮಿ ಹಾಗೂ ಹಸಿರುವ ವಲಯಗಳಲ್ಲಿಯೂ ಕಟ್ಟಡಗಳು ನಿರ್ಮಾಣಗೊಂಡಿವೆ. ಹಿಂದೂಪುರ ಮತ್ತು ಹೈದರಾಬಾದ್ಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಯಲಹಂಕದಲ್ಲಿ ಸಂಧಿಸುತ್ತವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಒಂದು ಸಣ್ಣ ಮಳೆ ಬಂದರೂ ರಸ್ತೆಯ ಮೇಲೆ ನೀರು ಹರಿಯುವುದು, ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿ ಎನಿಸಿದೆ. ಅಂಥ ಸಂದರ್ಭದಲ್ಲಿ ಮಾತ್ರ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ಮಾತನಾಡುತ್ತಿದ್ದರು.
ಯಲಹಂಕ ವಲಯದ ಯಲಹಂಕ, ಜಕ್ಕೂರು, ಅಲ್ಲಾಳಸಂದ್ರ, ಕೋಗಿಲು, ಅಟ್ಟೂರು, ಸಿಂಗಾಪುರ, ದೊಡ್ಡಬೊಮ್ಮಸಂದ್ರ, ಹೆಬ್ಬಾಳ, ನವನಗರ, ರಾಚೇನಹಳ್ಳಿ ಸೇರಿದಂತೆ ಸುಮಾರು 30 ಕೆರೆಗಳು ಒತ್ತುವರಿಯಾಗಿವೆ. ರಾಜಕಾಲುವೆಗಳು ಸಂಪೂರ್ಣ ಮಾಯವಾಗಿವೆ. ರಿಯಲ್ ಎಸ್ಟೇಟ್ ಕುಳಗಳೊಂದಿಗೆ ರಾಜಕಾರಿಣಿಗಳು ಶಾಮೀಲಾಗಿ ಕೆರೆ ನುಂಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇದೀಗ ಬಿಬಿಎಂಪಿ ಯಲಹಂಕ ವಲಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Tue, 13 September 22