ಎತ್ತಿನಹೊಳೆ ಯೋಜನೆಗೆ 4,708 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ಕೇಂದ್ರದ ನೆರವು ಕೋರಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರು, ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ 4,708 ಕೋಟಿ ರೂ. ಅನುದಾನವನ್ನು 'ಜಲ ಜೀವನ್ ಮಿಷನ್' ಅಡಿಯಲ್ಲಿ ನೀಡಲು ಮನವಿ ಮಾಡಿದ್ದಾರೆ. ಇದು 7 ಜಿಲ್ಲೆಗಳ ಸುಮಾರು 75 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಿದೆ.

ಎತ್ತಿನಹೊಳೆ ಯೋಜನೆಗೆ 4,708 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ
ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಸಚಿವ ಈಶ್ವರ ಖಂಡ್ರೆ
Image Credit source: Tv9 kannada
Edited By:

Updated on: Jun 30, 2026 | 6:40 PM

ಮುಖ್ಯಾಂಶಗಳು

  • ಎತ್ತಿನಹೊಳೆ ಯೋಜನೆಗೆ 4,708 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ
  • ಯೋಜನೆಯ ಒಟ್ಟು ವೆಚ್ಚದ ಪೈಕಿ 4,708.14 ಕೋಟಿ ರೂ
  • ಕೇಂದ್ರ ಸರ್ಕಾರದ 'ಜಲ ಜೀವನ್ ಮಿಷನ್' ಯೋಜನೆಯಡಿ ಭರಿಸುವಂತೆ ಅಧಿಕೃತ ಮನವಿ ಪತ್ರ

ದೆಹಲಿ, ಜೂನ್ 30: ಕರ್ನಾಟಕದ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ಬರಪೀಡಿತ ಜಿಲ್ಲೆಗಳ ಜೀವನಾಡಿಯಾಗಿರುವ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ಯನ್ನು ವೇಗವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರವು ಕೇಂದ್ರದ ನೆರವು ಕೋರಿದೆ. ದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಯೋಜನೆಯ ಒಟ್ಟು ವೆಚ್ಚದ ಪೈಕಿ 4,708.14 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’ (JJM) ಯೋಜನೆಯಡಿ ಭರಿಸುವಂತೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಯೋಜನೆಯ ಅಗತ್ಯತೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಸಚಿವ ಈಶ್ವರ ಖಂಡ್ರೆ, “ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ವ್ಯಾಪ್ತಿಗೆ ಈ ಯೋಜನೆ ಒಳಪಡುತ್ತದೆ. ಸುಮಾರು 6,657 ಹಳ್ಳಿಗಳು ಹಾಗೂ 38 ಪಟ್ಟಣಗಳ ಒಟ್ಟು 75.59 ಲಕ್ಷ ಜನಸಂಖ್ಯೆಗೆ ಸುಸ್ಥಿರ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಅತ್ಯಂತ ಅನಿವಾರ್ಯವಾಗಿದೆ. ಹೀಗಾಗಿ ಇದನ್ನು ಜೆಜೆಎಂ (JJM) ಯೋಜನೆಯಡಿಯಲ್ಲಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಪ್ರಸ್ತುತ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ‘ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ’ (VJNL) ಮೂಲಕ ಈ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವೇ ತನ್ನ ಸ್ವಂತ ಹಣದಿಂದ ಯೋಜನೆಯ ಬಹುತೇಕ ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?; ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳ ಸಾಧ್ಯತೆ

ಆದರೆ, ಯೋಜನೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 9,416.28 ಕೋಟಿ ರೂಪಾಯಿಗಳ ಉಳಿಕೆ ಕಾಮಗಾರಿಗಳು ಬಾಕಿ ಇವೆ. ಈ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ತನ್ನ ಪಾಲಿನ ಶೇಕಡಾ 50 ರಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಕಾಮಗಾರಿಗಳ ತ್ವರಿತ ಪ್ರಗತಿಗಾಗಿ ರಾಜ್ಯ ಸರ್ಕಾರ ವಿಶೇಷ ಒತ್ತಡ ಹೇರಿದೆ. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Tue, 30 June 26

Follow Us