ಬೆಂಗಳೂರು: ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಹೋಗ್ತಿದ್ದೇನೆ. ನೆಲಮಂಗಲ ಬಳಿಯ ಜಿಂದಾಲ್ ಪ್ರಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಹತ್ತು ದಿನಗಳ ಕಾಲ ನಾನು ಮನೆಯಲ್ಲಿ ಇರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನಲ್ಲಿ ನೆಲಮಂಗಲ ಬಳಿಯಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ (Jindal Naturecure Institute -JNI) ಚಿಕಿತ್ಸೆಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆಗಮಿಸಿದರು. ಇಂದಿನಿಂದ 10 ದಿನಗಳಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಹರು ಮತ್ತು ವಾಜಪೇಯಿ ಮಾದರಿ ನಾಯಕರು ಎಂದು ಕೇಂದ್ರ ಸಚಿವ ಗಡ್ಕರಿಯ ಹೇಳಿಕೆ ವಿಚಾರ ಪ್ರಸ್ತಾಪಿಸಿ, ಪಾಪ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸತ್ಯ ಹೇಳಿದ್ದಾರೆ. ಈ ವಿಚಾರದಲ್ಲಿ ಸಿ.ಟಿ.ರವಿಗೆ ಸ್ವಲ್ಪ ಜ್ಞಾನೋದಯ ಆದರೆ ಒಳ್ಳೆಯದು ಎಂದು ಆಶಿಸಿದ್ದಾರೆ.
ಕಳೆದ ಬಾರಿ ಅಸೆಂಬ್ಲಿ ಸಾರ್ವತ್ರಿಕ ಚುನಾವಣೆ ಬಳಿಕ, ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ (Shree Dharmasthala Manjunatheshwara (SDM) Yoga and Nature Cure Hospital) 2 ವಾರ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು.
ಸಿದ್ದರಾಮಯ್ಯ ಜಿಂದಾಲ್ನಿಂದ ಬಂದ ಮೇಲಾದರೂ ನಮ್ಮ ಬಗ್ಗೆ ಚೆನ್ನಾಗಿ ಮಾತಾಡಲಿ: ಸಚಿವ ಸೋಮಣ್ಣ
ಸಿದ್ದರಾಮಯ್ಯ ನಮ್ಮ ಸರ್ಕಾರದ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಆದ್ರೆ ನಮ್ಮ ಕೆಲ್ಸಾ ನಾವು ಮಾಡುತ್ತೇವೆ. ಅವರು ಇಷ್ಟರಲ್ಲಿ 15 ಜಿಂದಾಲ್ ಗೆ ವಿಶ್ರಾಂತಿಗೆ ಹೋಗುತ್ತಿದ್ದಾರೆ. ಬಂದ ಮೇಲಾದರೂ ನಮ್ಮ ಬಗ್ಗೆ ಚೆನ್ನಾಗಿ ಮಾತಾಡಲಿ ಎಂದು ದಾವಣಗೆರೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೇಕಿದ್ದರೆ ಸಿದ್ದರಾಮಯ್ಯ ಕರೆಯಲಿ ನಮ್ಮ ಸರ್ಕಾರದಲ್ಲಿ ಎನಾಗುತ್ತದೆ ಎಂಬುದನ್ನ ನಾನೇ ವಿವರಿಸುವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾಡಲಾದ ಜಾತಿ ಗಣತಿ ವಿಚಾರ ಈಗ ಚರ್ಚೆಯಲ್ಲಿದೆ. ಮೇಲಾಗಿ ಅವರ ಕಾಲದಲ್ಲಿ ಅವರೇ ಆ ವರದಿ ಅನುಷ್ಠಾನಕ್ಕೆ ತರದೇ ಇರುವುದು ಒಳ್ಳೆಯದ್ದೆ ಆಯಿತು. ನಮ್ಮ ಸರ್ಕಾರ ಯಾವುದೇ ಜಾತಿ ಜನಾಂಗಕ್ಕೆ ಒಳ್ಳೆಯದಾಗುವಂತಹ ಕೆಲ್ಸಾ ಮಾಡುತ್ತಿದೆ ಎಂದು ಸೋಮಣ್ಣ ತಿಳಿಸಿದರು.
(ex cm siddaramaiah to undergo treatment at jindal naturopathy at bangalore)
Published On - 11:07 am, Sat, 21 August 21