ಕಾವೇರಿ ನೀರಿನ ಬಗ್ಗೆ ಮಾತನಾಡುತ್ತ ಕಣ್ಣೀರು ಹಾಕಿದ ದೇವೇಗೌಡ, ವಾಸ್ತವಸ್ಥಿತಿ ಅಧ್ಯಯನಕ್ಕೆ ತಂಡ ಕಳಿಸಲು ಮೋದಿಗೆ ಮನವಿ

ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಯವರಿಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಪತ್ರ ಬರೆದಿದ್ದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾವೇರಿ ವಿಚಾರವಾಗಿ ಮಾತನಾಡುತ್ತ ಹೆಚ್‌ಡಿಡಿ ಕಣ್ಣೀರು ಹಾಕಿದ್ದಾರೆ. ಕಾವೇರಿ ನದಿ ವಿವಾದದ ಬಗ್ಗೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿಸಲಿ ಎಂದಿದ್ದಾರೆ.

Follow us
ಕಿರಣ್​ ಹನಿಯಡ್ಕ
| Updated By: ಆಯೇಷಾ ಬಾನು

Updated on: Sep 25, 2023 | 1:55 PM

ಬೆಂಗಳೂರು, ಸೆ.25: ಕಾವೇರಿ ನೀರಿಗಾಗಿ ನಾಡಿನಾದ್ಯಂತ ಹೋರಾಟ ನಡೆಯುತ್ತಿದೆ (Cauvery Water Dispute). ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ಅಲ್ಲ, ಒಂದೇ ಒಂದು ಹನಿಯೂ ನಾವು ಬಿಡಲು ಸಿದ್ದರಿಲ್ಲ ಎಂದು ರೈತರು, ಸಂಘಟನೆಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದೆಡೆ ಬೆಂಗಳೂರು, ಕರ್ನಾಟಕ ಬಂದ್​ಗೆ ಕರೆ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಯವರಿಗೆ (Narendra Modi) ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು (HD Deve Gowda) ಪತ್ರ ಬರೆದಿದ್ದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾವೇರಿ ವಿಚಾರವಾಗಿ ಮಾತನಾಡುತ್ತ ಹೆಚ್‌ಡಿಡಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ. ದೇವೇಗೌಡ, ಕುಮಾರಸ್ವಾಮಿಯವರು ಅಣೆಕಟ್ಟಿಗೆ ಹೋಗಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಅವರು ಅಲ್ಲಿನ ವಿವರಗಳನ್ನು ನೀಡಿದ ಬಳಿಕ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಇಂದು ನಾನು ಪ್ರತಿಭಟನೆಗಳು, ರಾಜಕೀಯ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಮಾತನಾಡುವುದಿಲ್ಲ. ಕುಮಾರಸ್ವಾಮಿ ಡ್ಯಾಮ್ ಸೈಟ್ ಗೆ ಹೋಗಿ ಮಾಹಿತಿ ಸಂಗ್ರಹಿಸಿದ್ದಾರೆ. ತಮಿಳುನಾಡಿನವರೂ ಬದುಕಬೇಕು ನಾವೂ ಬದುಕಬೇಕು. ಹೊರರಾಜ್ಯದವರನ್ನು ಕಳುಹಿಸಿ ಎಂದು ರಾಜ್ಯಸಭೆಯಲ್ಲಿ ಹೇಳಿದ್ದೆ. ನನ್ನ ಶಕ್ತಿ ಎಲ್ಲಾ ಬಳಕೆ ಮಾಡಿ ಎದ್ದು ನಿಂತು ಮಾತಾಡಿದ್ದೇನೆ, ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ‌ನಾಳೆ ಬಂದ್ ವಿಷಯದಲ್ಲಿ ಯಾರ್ಯಾರು ಏನೇನು ಮಾತಾಡುತ್ತಾರೆ ಅನ್ನೋದು ಮುಖ್ಯ ಅಲ್ಲ. ರಾಜ್ಯದ ಜನರನ್ನು ಉಳಿಸಲು 91ನೇ ವಯಸ್ಸಿನಲ್ಲಿ ಮಾತಾಡಿದೆ. ಸೋಮನಾಥ ಚಟರ್ಜಿ ನೇತೃತ್ವದಲ್ಲಿ ಸಭೆ ಆದಾಗ ಸಂಸತ್ ನಲ್ಲಿ ಬಾವಿಗೆ ಇಳಿದಾಗ ನಾಲ್ವರು ಸಚಿವರಲ್ಲಿ ಒಬ್ಬರೂ ಮಾತಾಡಲಿಲ್ಲ. ಬೆಳಗ್ಗೆ ಬರುತ್ತೇನೆ ಎಂದ ಅನಂತಕುಮಾರ್ ಪತ್ತೆ ಇರಲಿಲ್ಲ. ಮಹಾನುಭಾವರು ಇವತ್ತು ಮಾತಾಡ್ತಾರೆ. ನಾನು ಆ ಮಟ್ಟಕ್ಕೆ ಇಳಿದು ಮಾತಾಡಲ್ಲ. ನಾನು ಯಾರ ಬಗ್ಗೆಯೂ ಮಾತಾಡಲ್ಲ. ನಾಳೆ ಬಂದ್ ನಡೆದು ಹೋಗಲಿ. ಕುಮಾರಸ್ವಾಮಿ ಬಂದ್ ಗೆ ಬೆಂಬಲ ಕೊಟ್ಟಿದ್ದಾರೆ. ಬಂದ್ ಶಾಂತಿಯುತವಾಗಿ ನಡೆದು ಹೋಗಲಿ ಎಂದರು.

ಪ್ರಧಾನಿ ಮೋದಿ ನನ್ನ ಮನವಿಯನ್ನು ಪರಿಗಣಿಸುವ ವಿಶ್ವಾಸ ಇದೆ

ಕಾವೇರಿ ನದಿ ವಿವಾದದ ಬಗ್ಗೆ ಕೇಂದ್ರ ಸರ್ಕಾರ ಅರ್ಜಿ ಹಾಕಿಬೇಕು. ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿಸಲಿ. ಕಾವೇರಿ ವ್ಯಾಪ್ತಿಯ ವಾಸ್ತವಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳಿಸಲಿ. ತಜ್ಞರ ಸಮಿತಿ ಕಳಿಸಲು ಸುಪ್ರೀಂಕೋರ್ಟ್ ಗೆ ನಿವೇದನೆ ಮಾಡಿಕೊಳ್ಳಲು ಪ್ರಧಾನಿಯವರಿಗೆ ಮನವಿ ಮಾಡುತ್ತೇನೆ. ಪ್ರಧಾನಿ ಮೋದಿ ನನ್ನ ಮನವಿಯನ್ನು ಪರಿಗಣಿಸುವ ವಿಶ್ವಾಸ ಇದೆ ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.

ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ: ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದ ಹೆಚ್​ಡಿ ದೇವೇಗೌಡ

ಈ ವಿಷಯ ಮಂಡನೆ ಮಾಡಲು ಕುಮಾರಸ್ವಾಮಿ ಸ್ಥಳ ಪರಿಶೀಲನೆ ಮಾಡಬೇಕಿತ್ತಾ? ಏನಾಗಿದೆ ನಿಮ್ಮ ಇಲಾಖೆಗೆ? ಇಲ್ಲಿ ಸರ್ಕಾರ ವಿಫಲ ಆಗಿದೆ ಅಷ್ಟೇ. ರಾಜ್ಯ ಸರ್ಕಾರ ಕುಮಾರಸ್ವಾಮಿ ಕೊಟ್ಟ ಸಲಹೆಗೆ ಎಷ್ಟು ಮಾನ್ಯತೆ ಕೊಟ್ಟಿದೆ. 40 ಜನ ತಮಿಳರು ಒಟ್ಟಾಗಿದ್ದಾರೆ, ನನ್ನ‌ ಸರ್ಕಾರ ಹೋಗುತ್ತದೆ. ನಾಲ್ಕು ಜನ ಕರ್ನಾಟಕದ ಮಂತ್ರಿಗಳು ಕೂತಿದ್ದಾರೆ, ದೇವೇಗೌಡರೇ ನಾನು ಇನ್ನೂ ಒಂದು ವರ್ಷ ಸರ್ಕಾರ ನಡೆಸಬೇಕು ಎಂದು ಅಂದು ಮನ ಮೋಹನ್ ಮನವಿ ಮಾಡಿದರು. ಇಂದು ಮನಮೋಹನ್ ಸಿಂಗ್ ಇದ್ದಾರೆ, ಆ ನಾಲ್ಕು ಜನ ಮಂತ್ರಿಗಳೂ ಇದ್ದಾರೆ. ಕೇವಲ ಒಂದು ಕಾರ್ಯಕ್ರಮ ಅದು ಗ್ಯಾರಂಟಿ, ‌ಅದರ ಬಗ್ಗೆ ಲಘುವಾಗಿ ನಾನು ಮಾತಾಡಲ್ಲ. ಬಡತನವನ್ನು ಅರ್ಥ ಮಾಡಿಕೊಳ್ಳಲು ನಮ್ಮ ಪಕ್ಷಕ್ಕೆ ಯಾರೂ ಕಲಿಸಬೇಕಿಲ್ಲ. ರಾಜಕೀಯವಾಗಿ ಯಾಕೆ ನಿರ್ಧಾರ ತೆಗೆದುಕೊಂಡೆವು ಅಂತಾ ನಾಡಿದ್ದು ಮಾತಾಡೋಣ. ಅದು ಕುಮಾರಸ್ವಾಮಿ ನಿರ್ಧಾರ ಅಲ್ಲ, ಪಕ್ಷದ ನಿರ್ಧಾರ ಎಂದು ಹೆಚ್​ಡಿ ದೇವೇಗೌಡರು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ