ತಮಿಳುನಾಡಿಗೆ ಹರಿದ ಕಾವೇರಿ: ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದ ಹೆಚ್​ಡಿ ದೇವೇಗೌಡ

ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWMA ಹೊರಡಿಸಿದ ಆದೇಶಕ್ಕೆ ಮಂಡ್ಯದಲ್ಲಿ ರೈತರ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ. ರಾಜ್ಯದಲ್ಲಿ ಬರ ಸ್ಥಿತಿ ಇದ್ದರೂ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ದೆಹಲಿಯಲ್ಲಿ ಹೇಳಿದ್ದಾರೆ. ನಮ್ಮ ರಾಜ್ಯದ ಸಿಎಂ ತಮಿಳುನಾಡಿನ ಸಿಎಂ ತರಹ ಇದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.

ತಮಿಳುನಾಡಿಗೆ ಹರಿದ ಕಾವೇರಿ: ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದ ಹೆಚ್​ಡಿ ದೇವೇಗೌಡ
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ಹೆಚ್​ಡಿ ದೇವೇಗೌಡ ಆಕ್ರೋಶ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Rakesh Nayak Manchi

Updated on: Sep 18, 2023 | 6:23 PM

ನವದೆಹಲಿ, ಸೆ.18: ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ (CWMA) ಆದೇಶ ಹೊರಡಿಸಿದೆ. ಇದನ್ನು ಖಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆಯೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿರುವುದು ರೈತರ ಹೋರಾಟ ತೀವ್ರಗೊಳ್ಳಲು ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿ ಎಂಎಲ್​ಸಿ ರವಿಕುಮಾರ್ (Ravikumar), ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ಸೇರಿದಂತೆ ಹಲವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, CWMA ಆದೇಶ ಕರ್ನಾಟಕಕ್ಕೆ ಪೆಟ್ಟು ನೀಡಿದೆ. ಬೆಂಗಳೂರಿಗೆ ಕುಡಿಯುವ ನೀರು ಬೇಕಿದೆ, ಮುಂದೇನಾಗುತ್ತೋ ಗೊತ್ತಿಲ್ಲ. ಕಾವೇರಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ದುರಂತ. ಸರ್ಕಾರ ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದರು.

ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ ಅನ್ನಿಸುತ್ತೆ. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಖಂಡಿಸಿದ್ದೆ. ಧರಣಿ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೆ. ಇವತ್ತು ಸದನದಲ್ಲಿ ಕಾವೇರಿ ವಿಚಾರ ಎತ್ತಿದ್ದೇನೆ. ಕರ್ನಾಟಕ, ತಮಿಳುನಾಡಿಗೆ ಸಂಬಂಧ ಇಲ್ಲದ ಅಧಿಕಾರನ್ನು ಗ್ರೌಂಡ್​ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ. ನಾವು ಒಪ್ಪಿಕೊಳ್ಳುತ್ತೇವೆ, ಆದರೆ ತಮಿಳುನಾಡು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟು ಇದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲ ಎಂದರು.

ಕೂಡಲೇ ಬರ ಪರಿಹಾರ ಘೋಷಣೆಗೆ ಒತ್ತಾಯ

ಕಾವೇರಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್​ಸಿ ರವಿಕುಮಾರ್, ರಾಜ್ಯದ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಘೋಷಣೆ ಮಾಡಲಿ. ಎಕರೆಗೆ ತಲಾ 25 ಸಾವಿರ ರೂ. ಬೆಳೆ ಪರಿಹಾರ ಕೊಡಲಿ ಎಂದರು.

ಇದನ್ನೂ ಓದಿ: ಕಾವೇರಿ ನದಿಯ 3 ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿತ, ಕಳೆದ 10 ವರ್ಷಕ್ಕಿಂತ ಈ ವರ್ಷ ಭಾರಿ ಕಡಿಮೆ

ಕಾವೇರಿ, ಬರ ವಿಚಾರ ಡೈವರ್ಟ್ ಮಾಡಲು ಮೂವರು ಡಿಸಿಎಂಗಳ ನೇಮಕದ ಬಗ್ಗೆ ಚರ್ಚೆ ಎತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಜಣ್ಣ, ಚಲುವರಾಯಸ್ವಾಮಿ ಬುದ್ಧಿವಂತರು. ರಾಜ್ಯದಲ್ಲಿ ಬರ, ಕಾವೇರಿ ಸಮಸ್ಯೆ ಬಗ್ಗೆ ಚರ್ಚೆ ಆಗಬಾರದು ಅಂತಾ ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಚರ್ಚೆಗೆ ಬಿಟ್ಟಿದ್ದಾರೆ ಎಂದರು.

ತೀರ್ಪು ಅವೈಜ್ಞಾನಿಕ, ಅವಾಸ್ತವಿಕ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪು ಅವೈಜ್ಞಾನಿಕ ಅವಾಸ್ತವಿಕ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ತೀರ್ಪು ಕೊಡುವ ಮುನ್ನ ರಾಜ್ಯಕ್ಕೆ ಅಧಿಕಾರಿಗಳು ಭೇಟಿ ನೀಡಬೇಕಿತ್ತು. ನವದೆಹಲಿಯಲ್ಲಿ ಕೈಗೊಂಡಿರುವ ತೀರ್ಮಾನ ಏಕಪಕ್ಷೀಯವಾದದ್ದು. ಇದನ್ನು ರಾಜ್ಯ ಸರ್ಕಾರ ಖಡಾಖಂಡಿತವಾಗಿ ತಿರಸ್ಕರಿಸಬೇಕು ಎಂದರು.

ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಬೇಕು. ಸರ್ವಪಕ್ಷಗಳ ನಿಲುವಿಗೆ ರಾಜ್ಯ ಸರ್ಕಾರ ಬದ್ಧರಾಗಿರಬೇಕು. ಒಂದು ವೇಳೆ ತಮಿಳುನಾಡಿಗೆ ನೀರು ಬಿಟ್ಟರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು. ರೈತರೇ ಕಾವೇರಿ ನೀರು ನಿಲ್ಲಿಸುವ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. ಕರ್ನಾಟಕದ ಶೇಕಡಾ 90ರಷ್ಟು ಭಾಗದಲ್ಲಿ ಬರ ಪರಿಸ್ಥಿತಿ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಬರ ಪರಿಸ್ಥಿತಿ ಇದೆ. ಕುಡಿಯುವ ನೀರಿಗೂ ರಾಜ್ಯದಲ್ಲಿ ಸಮಸ್ಯೆಯಾಗುತ್ತಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮುಂದುವರಿದ ರೈತರ ಪ್ರತಿಭಟನೆ

CWMA ಆದೇಶದಿಂದ ಕೆರಳಿದ ಮಂಡ್ಯದ ರೈತರು, ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ಧರಣಿ ನಡೆಸಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.

ಮಳೆಯನ್ನೂ ಲೆಕ್ಕಿಸದೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಇದರಿಂದಾಗಿ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತವು. ಇದರ ನಡುವೆ ಟ್ರ್ಯಾಕ್ಟರ್​ನಲ್ಲಿ ಹೋಗುತ್ತಿದ್ದ ಗೌರಿ ಗಣೇಶ ಪ್ರತಿಮೆಯೂ ಸಿಲುಕಿಕೊಂಡಿತು.

ಬೈಕರ್​ಗಳನ್ನು ತರಾಟಗೆ ತೆಗೆದುಕೊಂಡ ರೈತರು

ಲಾಂಗ್ ರೈಡ್ ಹೋಗುತ್ತಿದ್ದ ಬೈಕ್​ಗಳು ಹೆದ್ದಾರಿ ತಡೆ ನಡುವೆಯೇ ತೆರಳುವುದನ್ನು ನೋಡಿದ ಪ್ರತಿಭಟನಾ ನಿರತ ರೈತರು, ಸವಾರರನ್ನು ತರಾಟೆಗೆ ತೆಗೆದುಕೊಂಡರು. ಯಾಕೆ ಹೋಗುತ್ತಾ ಇದ್ದೀರಾ? ನಿಂತು ಕೊಳ್ಳಿ. ನಾವು ನೀರಿಗಾಗಿ ಪ್ರತಿಭಟನೆ ಮಾಡುತ್ತಿರುವುದು ಎಂದು ಗರಂ ಆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ