
ಬೆಂಗಳೂರು, ಆಗಸ್ಟ್ 22: ರಾಮನಗರದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧದ ಬೃಹತ್ ಜಾಲದ ತನಿಖೆ ದಿನಕ್ಕೊಂದು ಮೈಲಿಗಲ್ಲು ತಲುಪುತ್ತಿದೆ. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಸರ್ಕಾರ ಎಸ್‌ಐಟಿ (SIT) ರಚಿಸಿದೆಯಾದರೂ, ಕಾನೂನು ತೊಡಕುಗಳು ಎದುರಾಗಿವೆ. ಹೀಗಾಗಿ ಔಷಧ ಸಂಬಂಧಿತ ಅಪರಾಧಗಳ ಸಂಪೂರ್ಣ ತನಿಖೆಗೆ ವಿಶೇಷ ಅಧಿಕಾರ ಕೋರಿ ಗೃಹ ಇಲಾಖೆಗೆ ಪತ್ರ ಬರೆಯಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ನಿನ್ನೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಎಸ್‌ಐಟಿಗೆ ಕೇವಲ ದೂರಿನ ಆಧಾರದಲ್ಲಿ ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಷ್ಟೇ ಅವಕಾಶವಿದೆ. ನಿಯಮಗಳ ಪ್ರಕಾರ ‘ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ’ಯಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರ ಡ್ರಗ್ ಕಂಟ್ರೋಲ್ ಬೋರ್ಡ್‌ಗೆ (Drug Control Board) ಮಾತ್ರ ಇರುತ್ತದೆ.
ಆದರೆ ಈ ನಕಲಿ ಔಷಧ ಜಾಲದ ಅಪರಾಧಕ್ಕೆ ಕಾನೂನಿನಲ್ಲಿ ಜೀವಾವಧಿ ಶಿಕ್ಷೆಯವರೆಗೂ ಅವಕಾಶವಿದೆ. ಪ್ರಕರಣವು ಅತ್ಯಂತ ಗಂಭೀರವಾಗಿರುವುದರಿಂದ, ತಮಗೇ ಸಂಪೂರ್ಣವಾಗಿ ತನಿಖೆ ನಡೆಸಲು ವಿಶೇಷ ಅಧಿಕಾರ ನೀಡುವಂತೆ ಕೋರಿ ಎಸ್‌ಐಟಿ ಗೃಹ ಇಲಾಖೆಗೆ ಮನವಿ ಸಲ್ಲಿಸಲಿದೆ.
ಈ ಪ್ರಕರಣದಲ್ಲಿ ಮುಖ್ಯ ಸೂತ್ರಧಾರ ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಗಳು ಖಾಸಗಿ ‘ಪೋರ್ಟರ್’ (Porter) ಆ್ಯಪ್ ಬಳಸಿ, ಬೆಂಗಳೂರಿನಲ್ಲಿ ಕುಳಿತು ರಾಮನಗರದ ಫಾರ್ಮ್‌ಹೌಸ್‌ನಿಂದ ಪ್ರತಿ ವಾರ ಸುಮಾರು 100 ಬಾಟಲಿ ನಕಲಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದರು.
ಇದನ್ನೂ ಓದಿ Fake Medicine: ರಾಮನಗರ ನಕಲಿ ಔಷಧ ಜಾಲ: ಪೋರ್ಟರ್’ ಆ್ಯಪ್ ಮೂಲಕ ನಡೆಯುತ್ತಿತ್ತು ಸಪ್ಲೈ!
ವಾರದಲ್ಲಿ 2-3 ಬಾರಿ ರಹಸ್ಯವಾಗಿ ಕಾರುಗಳು ಬಂದು ಹೋಗುತ್ತಿದ್ದ ಈ ಫಾರ್ಮ್‌ಹೌಸ್ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿತ್ತು. ಯಾರೂ ಒಳಗೆ ಬರದಂತೆ ಕ್ರೂರ ತಳಿಯ ನಾಯಿಯನ್ನು ಸಾಕಲಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದಾಗ ಈ ದಂಧೆ ಬಯಲಿಗೆ ಬಂದಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ